June 27, 2026
WhatsApp Image 2026-06-27 at 1.04.43 AM

ಮಂಗಳೂರು: ತ್ವಾಖಾ ಉಸ್ತಾದ್ ಎಂದೇ ಪ್ರಸಿದ್ಧರಾದ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝ್‌ಹರಿ ಉಸ್ತಾದರು ಮಂಗಳೂರಿನ ಹೃದಯವನ್ನು ಗೆದ್ದ ಜನಪ್ರಿಯ ಖಾಝಿಯಾಗಿದ್ದಾರೆ.

1947 ರ ಆಗಸ್ಟ್ 10 ರಂದು ಖಾಝಿಯಾರಕತ್ತ್ ಮುಹಮ್ಮದ್ ಕುಂಞಿ ಮತ್ತು ಆಯಿಷಾ (ಚೆಂಬರಿಕ ಸಿ.ಎಂ. ಉಸ್ತಾದ್ ಅವರ ಸಹೋದರಿ) ದಂಪತಿಗಳ ಪುತ್ರನಾಗಿ ತ್ವಾಖಾ ಅಹ್ಮದ್ ಅಲ್ ಅಝ್‌ಹರಿ ಉಸ್ತಾದರು ಜನಿಸಿದರು. ಇವರ ಕುಟುಂಬವು ಅನೇಕ ಖಾಝಿಗಳ ವಂಶಪರಂಪರೆಯನ್ನು ಹೊಂದಿದ್ದು, ಅದೇ ಕಾರಣದಿಂದ ‘ಖಾಝಿಯಾರಗಂ’ ಎಂಬ ಘನತೆಯ ಹೆಸರನ್ನು ಪಡೆದುಕೊಂಡಿದೆ.

ತಳಂಗರ ಮುಸ್ಲಿಂ ಹೈಸ್ಕೂಲ್‌ನಲ್ಲಿ ಶೈಖುನಾ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಪಡನ್ನ ಮಾವಿಲಾಡ್ ಕಡಪ್ಪುರದಲ್ಲಿ ಯು.ಕೆ. ಆಟ್ಟಕ್ಕೋಯ ತಂಙಳ್ ಅವರ ದರ್ಸ್‌ಗೆ ಸೇರಿದರು. ಒಂದು ವರ್ಷದ ನಂತರ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ಅವರ ದರ್ಸ್ ಗೆ ಸೇರಿ ಕಲಿಕೆ ಮುಂದುವರೆಸಿದರು. ಆ ಬಳಿಕ ಕೆ.ಕೆ. ಅಬ್ದುಲ್ಲಾ ಮುಸ್ಲಿಯಾರ್ ಪೊನ್ನಾನಿ ಮಊನತ್ತಿನಲ್ಲಿ ಪ್ರಾಂಶುಪಾಲರಾಗಿದ್ದ ಸಮಯದಲ್ಲಿ ಎರಡು ತಿಂಗಳ ಕಾಲ ಅವರ ಬಳಿ ಜ್ಞಾನಾರ್ಜನೆ ಮಾಡಿದರು.
ಮಿತ್ತಬೈಲ್ ಉಸ್ತಾದ್, ನಾಟ್ಟಿಗ ವಿ. ಮೂಸಾ ಮುಸ್ಲಿಯಾರ್ ಪೊನ್ನಾನಿಯಲ್ಲಿ ತ್ವಾಖಾ ಉಸ್ತಾದರ ಸಹಪಾಠಿಗಳಾಗಿದ್ದರು. ನಂತರ ಕೊಡಂಙಲ್ಲೂರ್ ಅಝೀಕೋಡ್‌ನ ಅಲ್ ಇರ್ಷಾದ್ ಕಾಲೇಜಿನಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಜ್ಞಾನಾರ್ಜನೆಯಲ್ಲಿ ಮುಳುಗಿದರು.

ಉನ್ನತ ಧಾರ್ಮಿಕ ಶಿಕ್ಷಣವನ್ನು ವಿದೇಶದಲ್ಲಿ ಕಲಿಯಬೇಕು ಎಂಬುದು ತ್ವಾಖಾ ಉಸ್ತಾದರ ಮನದಾಸೆಯಾಗಿತ್ತು. ಅಲ್ ಇರ್ಷಾದ್‌ನಲ್ಲಿ ಕಲಿತ ನಂತರ, ಅವರು ದಿಯೋಬಂದ್‌ನ ಪ್ರಸಿದ್ಧ ದಾರುಲ್ ಉಲೂಮ್‌ಗೆ ಪ್ರವೇಶ ಪಡೆದರು. ಅಲ್ಲಿ ಅಧ್ಯಯನ ಮುಗಿಸಿ ಖಾಸಿಮಿ ಬಿರುದನ್ನು ಪಡೆದರು.

ದಿಯೋಬಂದ್‌ನಿಂದ ಹುಟ್ಟೂರಿಗೆ ಮರಳಿದ ಬಳಿಕ , ಕೋಟ್ಟಯಂ ತಿರುನಕ್ಕರ ಮಸೀದಿಯಲ್ಲಿ ಖತೀಬ್ ಮತ್ತು ಮುದರ್ರಿಸ್ ಆಗಿ ಮೂರು ವರ್ಷಗಳ ಕಾಲ ಪ್ರಶಂಸನೀಯ ಸೇವೆಗೈದರು . ನಂತರ ತಮ್ಮ ಭಾವನ ಸಹಕಾರದಿಂದ ಉಮ್ರಾ ನಿರ್ವಹಿಸುವ ಸೌಭಾಗ್ಯ ದೊರೆಯಿತು. ಸೌದಿ ಅರೇಬಿಯಾಗೆ ಅಂದು ನೇರ ವಿಮಾನ ಸಂಪರ್ಕ ಲಭ್ಯವಿಲ್ಲದ ಕಾರಣ ಈಜಿಪ್ಟ್ ಮೂಲಕ ಪ್ರಯಾಣದ ಮಾರ್ಗವನ್ನು ಆರಿಸಬೇಕಾಯಿತು. ಈ ಸಂದರ್ಭದಲ್ಲಿ ಉಸ್ತಾದರು ತಮ್ಮ ಕನಸಿನ ತೀರ್ಥಕ್ಷೇತ್ರವಾಗಿದ್ದ ಈಜಿಪ್ಟ್‌ನ ವಿಶ್ವವಿಖ್ಯಾತ ಅಲ್ ಅಝ್‌ಹರ್ ವಿಶ್ವವಿದ್ಯಾಲಯಕ್ಕೆ ತೆರಳುವ ದೃಢ ನಿರ್ಧಾರವನ್ನು ತೆಗೆದುಕೊಂಡರು. ಅಲ್ಲಿ ಅವರು ಉಸೂಲುಲ್ ಫಿಖ್ಹ್ (Usul al-Fiqh) ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಪ್ರತಿಷ್ಠಿತ ‘ಅಲ್ ಅಝ್‌ಹರಿ’ ಬಿರುದಿನೊಂದಿಗೆ ತೇರ್ಗಡೆ ಹೊಂದಿದರು.

ಅಲ್ ಅಝ್ ಹರ್ ನಲ್ಲಿ ಶಿಕ್ಷಣದ ಬಳಿಕ ಉಸ್ತಾದರು ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ಅಲ್ಲಿಂದಲೇ ಒಮಾನ್‌ನ ಸಲಾಲ ಕಡೆಗೆ ಪ್ರಯಾಣ ಬೆಳೆಸಿದರು. ಅಲ್ಲಿ ಪೆಟ್ರೋಲಿಯಂ ಸಚಿವರ ಕಂಪನಿಯಲ್ಲಿ ನೌಕರಿ ಜೊತೆಗೆ ಸಮೀಪದ ಮಸೀದಿಯಲ್ಲಿ ಖುತುಬಾ ನಿರ್ವಹಿಸುವ ಭಾಗ್ಯವೂ ದೊರಕಿತ್ತು.ವರ್ಷ ಕಳೆದಾಗ ಅಲ್ಲಿನ ಸುಲ್ತಾನರು ಅವರ ತಾಯಿಯ ಸ್ಮರಣಾರ್ಥ ಸಲಾಲಾದಲ್ಲಿ ತ್ವಾಖಾ ಎಂಬ ಪ್ರದೇಶದಲ್ಲಿ ಮಸೀದಿಯನ್ನು ನಿರ್ಮಾಣ ಮಾಡಿದಾಗ,ಅದಾಗಲೇ ಉಸ್ತಾದರ ಹೃದಯಸ್ಪರ್ಶಿ ಖುತುಬಾಗಳಿಂದ ಆಕರ್ಷಿತರಾಗಿದ್ದ ಸುಲ್ತಾನ್ , ಅವರನ್ನು ಆ ಮಸೀದಿಯ ಖತೀಬ್ ಆಗಿ ನೇಮಿಸುವ ಮೂಲಕ ಗೌರವವನ್ನು ನೀಡಿದರು. ಅಂದಿನಿಂದ ಈ ಪ್ರದೇಶದ ಹೆಸರಿನಿಂದಲೇ ಅವರು ‘ತ್ವಾಖಾ’ ಉಸ್ತಾದ್ ಎಂಬ ಖ್ಯಾತಿಯನ್ನು ಪಡೆದು, ಸುಮಾರು 28 ವರ್ಷಗಳ ಕಾಲ ಅಲ್ಲಿ ಅಮೂಲ್ಯ ಸೇವೆಯನ್ನು ನಿರ್ವಹಿಸಿದರು.

ಸಲಾಲಾದ ಪ್ರವಾಸಿ ಜೀವನದಲ್ಲಿ ಕೆ.ಕೆ. ಅಬೂಬಕರ್ ಹಝ್ರತ್, ಮೌಲಾನಾ ಕೆ.ವಿ. ಉಸ್ತಾದ್, ಕೆ.ಟಿ. ಮಾನು ಮುಸ್ಲಿಯಾರ್ ಅವರಂತಹ ದಿಗ್ಗಜ ವಿದ್ವಾಂಸರೊಂದಿಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡರು.

ಸಲಾಲಾದ ಪ್ರವಾಸಿ ಜೀವನದ ಅಧ್ಯಾಯವನ್ನು ಮುಕ್ತಾಯಗೊಳಿಸಿ ಸ್ವದೇಶಕ್ಕೆ ಮರಳಿದ ನಂತರ, ಶಹೀದೇ ಮಿಲ್ಲತ್ ಸಿ.ಎಂ. ಉಸ್ತಾದರ ನಿಧನದ ನಂತರ,ತೆರವಾಗಿದ್ದ ಪ್ರತಿಷ್ಠಿತ ಮಂಗಳೂರು ಖಾಝಿ ಸ್ಥಾನಕ್ಕೆ ಆಯ್ಕೆಯಾಗುವ ಸೌಭಾಗ್ಯ ದೊರೆಯಿತು.ನಂತರ ಟಿ.ಕೆ.ಎಂ. ಬಾವಾ ಮುಸ್ಲಿಯಾರ್ ಅವರ ಮರಣದ ಬಳಿಕ, ಸಮಸ್ತ ಕಾಸರಗೋಡು ಜಿಲ್ಲಾ ಜಿಲ್ಲಾಧ್ಯಕ್ಷ ಮತ್ತು ಸಮಸ್ತ ಕೇಂದ್ರ ಮುಶಾವರ ಸದಸ್ಯ ಸೇರಿದಂತೆ ಹಲವಾರು ಗೌರವಯುತ ಸ್ಥಾನಗಳನ್ನು ಅಲಂಕರಿಸಿದರು.

ಕರ್ನಾಟಕದ ಕಾಶಿಪಟ್ನದಲ್ಲಿ ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಯೂನಿವರ್ಸಿಟಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ವಿದ್ಯಾ ಸಂಸ್ಥೆಯ ಪ್ರಧಾನ ಮಾರ್ಗದರ್ಶಕರಾಗಿದ್ದಾರೆ ಶೈಖುನಾ ತ್ವಾಖಾ ಉಸ್ತಾದ್.

ವಿದ್ವಾಂಸರು ಹಾಗೂ ವಾಗ್ಮಿಯೂ ಆಗಿರುವ ಅವರು ತಮ್ಮ ಗಾಂಭೀರ್ಯ ತುಂಬಿದ ಭಾಷಣಗಳಿಂದ ಗಮನ ಸೆಳೆದಿದ್ದಾರೆ.
ಮಂಗಳೂರು, ದಕ್ಷಿಣ ಕನ್ನಡ, ಕೀಝೂರು, ಚೆಂಬರಿಕ ಸಂಯುಕ್ತ ಜಮಾಅತ್ ಸೇರಿದಂತೆ ಸುಮಾರು 200ಕ್ಕೂ ಅಧಿಕ ಮೊಹಲ್ಲಾಗಳ ಖಾಝಿ ಸ್ಥಾನವನ್ನು ಅಲಂಕರಿಸಿದ್ದಾರೆ.
ಅನಿರೀಕ್ಷಿತವಾಗಿ ಉಮ್ಮತ್ತಿನ ಸ್ನೇಹ ನಿಧಿಯನ್ನು ಕಳೆದುಕೊಂಡೆವು. 2026 ಜೂನ್ 23 (1448 ಮುಹರ್ರಂ 07 ) ರಂದು ನಮನ್ನು ಅಗಲಿ ಪರಲೋಕ ಯಾತ್ರೆಯಾದರು..

About The Author

Leave a Reply