

ಕಾರ್ಕಳ/ಹೆಬ್ರಿ: ಕಾರ್ಕಳ ಸಮೀಪದ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದಿದ್ದು, ಜೊತೆಗೆ ಹೆಬ್ರಿಯಲ್ಲಿ ಹಾಡುಹಗಲೇ ಕರು ಮೇಲೆ ಚಿರತೆ ದಾಳಿ ನಡೆಸಿದ್ದು, ಸ್ಥಳೀಯರಲ್ಲಿ ಆತಂಕವನ್ನು ಮೂಡಿಸಿದೆ. ಈ ಕೂಡಲೇ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಾರ್ಕಳದಲ್ಲಿ ಚಿರತೆ ಪ್ರತ್ಯಕ್ಷ:
ಜೂನ್ 24 ರಂದು ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಕಾರ್ಕಳದ ಸಾಣೂರು ಗ್ರಾಮದ ಪಿಲಿಕಲ್ಲು ಸಮೀಪದ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಕಾರ್ಕಳ ಪಟ್ಟಣದಿಂದ ಮನೆಗೆ ಮರಳುತ್ತಿದ್ದ ಸ್ಥಳೀಯ ನಿವಾಸಿಯೊಬ್ಬರು ರಸ್ತೆಯನ್ನು ದಾಟುತ್ತಿದ್ದ ಚಿರತೆಯನ್ನು ನೋಡಿ, ಅದನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.ಈ ಸ್ಥಳದ ಸಮೀಪದಲ್ಲಿಯೇ ಶಿಕ್ಷಣ ಸಂಸ್ಥೆಯೊಂದು ಇರುವುದರಿಂದ ಮತ್ತು ಪ್ರತಿನಿತ್ಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಓಡಾಡುವುದರಿಂದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಪ್ರದೇಶದಲ್ಲಿ ಪರಿಶೀಲನೆ ನಡೆಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಾಡುಹಗಲೇ ಹೆಬ್ರಿಯಲ್ಲಿ ಕರು ಮೇಲೆ ಚಿರತೆ ದಾಳಿ:
ಶುಕ್ರವಾರ ಹೆಬ್ರಿಯ ಸೀತಾನದಿ ನೇಚರ್ ಕ್ಯಾಂಪ್ ಸಮೀಪದ ಗದ್ದೆಯಲ್ಲಿ ಮೇಯುತ್ತಿದ್ದ ಕರು ಮೇಲೆ ಚಿರತೆ ಹಗಲಲ್ಲೇ ದಾಳಿ ನಡೆಸಿದೆ. ಚಂದ್ರಶೇಖರ್ ಶೆಟ್ಟಿ ಎಂಬುವವರಿಗೆ ಸೇರಿದ ಕರುವನ್ನು ಚಿರತೆ ಕುತ್ತಿಗೆಯ ಭಾಗದಲ್ಲಿ ಕಚ್ಚಿ ಗಾಯಗೊಳಿಸಿದೆ. ಇತರೆ ದನಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದರಿಂದ ಚಿರತೆ ಅಲ್ಲಿಂದ ಪರಾರಿಯಾಗಿದೆ.ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಹಿಂದೆಯೂ ಹಲವು ನಾಯಿಗಳು ಮತ್ತು ದನಗಳು ಚಿರತೆಗೆ ಬಲಿಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂತಹ ಘಟನೆಗಳಿಂದಾಗಿ ಸಾಕು ಪ್ರಾಣಿಗಳ ರಕ್ಷಣೆಗಾಗಿ ಈಗ ಅನೇಕರು ತಮ್ಮ ನಾಯಿಗಳನ್ನು ಪಂಜರದಲ್ಲಿ ಇರಿಸುತ್ತಿದ್ದಾರೆ. ಹಗಲಲ್ಲೇ ನಡೆದ ಈ ದಾಳಿಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.






