

ಉಪ್ಪಿನಂಗಡಿ: ಮಠ ನಿವಾಸಿ ಆದಂ ಅವರ ಮನೆಯಲ್ಲಿ ಬುಧವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಬೆಂಕಿ ಅವಘಡದಲ್ಲಿ ಮನೆಯಲ್ಲಿದ್ದ ಟಿ.ವಿ., ವಿವಿಧ ವಿದ್ಯುತ್ ಉಪಕರಣಗಳು, ಕಪಾಟು, ಬಟ್ಟೆ, ಅಗತ್ಯ ದಾಖಲೆ ಪತ್ರಗಳು ಹಾಗೂ ಮನೆಯ ವಿದ್ಯುತ್ ಸಂಪರ್ಕದ ವೈರ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆಯಿಂದ ಸುಮಾರು ರೂ. 3 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ವೇಳೆ ಮನೆಯ ಮಾಲೀಕ ಆದಂ ಅವರು ತಮ್ಮ ಪತ್ನಿಯನ್ನು ಔಷಧಕ್ಕಾಗಿ ಉಪ್ಪಿನಂಗಡಿಗೆ ಕರೆದುಕೊಂಡು ಹೋಗಿದ್ದರು. ಅವರೊಂದಿಗೆ ಪುತ್ರಿಯೂ ತೆರಳಿದ್ದರು. ಆ ಸಮಯದಲ್ಲಿ ಶಾಲೆಯಿಂದ ಬಂದಿದ್ದ ಮೊಮ್ಮಕ್ಕಳು ಮಾತ್ರ ಮನೆಯಲ್ಲಿ ಇದ್ದರು.
ಮನೆಯೊಳಗೆ ಹೊಗೆ ಮತ್ತು ಬೆಂಕಿ ಕಾಣಿಸುತ್ತಿದ್ದಂತೆ ಮಕ್ಕಳು ತಕ್ಷಣ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳೀಯರು ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಅಷ್ಟರಲ್ಲೇ ಮನೆಯೊಳಗಿನ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.






