July 7, 2026
WhatsApp Image 2026-07-06 at 5.07.09 PM

ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಸುಮಾರು 23 ಲಕ್ಷ ರೂಪಾಯಿ ಹಣ ದುರ್ಬಳಕೆ ಮತ್ತು ವಂಚನೆ ನಡೆಸಿದ ಆರೋಪದಡಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಹಾಗೂ ಆಕೆಯ ಪತಿಯನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಗಂಧಿ ಮತ್ತು ಆಕೆಯ ಪತಿ ಸಂತೋಷ್ ಎಂದು ಗುರುತಿಸಲಾಗಿದೆ. ಸುಗಂಧಿ ಅವರು 2023ರಿಂದ 2025ರವರೆಗೆ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸದಸ್ಯರಿಂದ ಸಂಗ್ರಹಿಸಿದ ಸಾಲ ಮರುಪಾವತಿ ಹಣವನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿ, ಅದನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೇ ದುರ್ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ.

ಇದಲ್ಲದೆ, ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್‌ಗಳಿಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯ ನಕಲಿ ಸಹಿಗಳನ್ನು ಮಾಡಿ ಬ್ಯಾಂಕ್‌ನಿಂದ ಹಣ ಪಡೆದಿರುವುದು, ಲೆಕ್ಕಪರಿಶೋಧನೆ ವೇಳೆ ಅನುಮಾನ ಬಾರದಂತೆ ಪ್ರತ್ಯೇಕ ಸಾಲ ಖಾತೆ ಪುಸ್ತಕಗಳನ್ನು ಸೃಷ್ಟಿಸಿ ನಿರ್ವಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಮೂಲಕ ಒಕ್ಕೂಟಕ್ಕೆ ಸುಮಾರು 23 ಲಕ್ಷ ನಷ್ಟ ಉಂಟುಮಾಡಿ ನಂಬಿಕೆದ್ರೋಹ ಹಾಗೂ ವಂಚನೆ ಎಸಗಿರುವ ಆರೋಪ ಇದೆ.

ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನ ಹಾಗೂ ಹಿರಿಯಡಕ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಪುನೀತ್ ಕುಮಾರ್ ಬಿ.ಇ. ಮತ್ತು ತನಿಖಾಧಿಕಾರಿ ಪಿಎಸ್‌ಐ ವಿಠ್ಠಲ ಮಲವಡಕರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಾದ ಸುಗಂಧಿ ಹಾಗೂ ಆಕೆಯ ಪತಿ ಸಂತೋಷ್ ಸೇರಿ ವಿವಿಧ ಸದಸ್ಯರ ಹೆಸರಲ್ಲಿ ನಕಲಿ ಸಹಿ ಮತ್ತು ದಾಖಲೆಗಳನ್ನು ಸೃಷ್ಟಿಸಿರುವುದು ಕಂಡುಬಂದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

About The Author

Leave a Reply