

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ, ಜೈಲಿನಲ್ಲಿರುವ ಅವರ ಮೊಮ್ಮಗ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಯಾವುದೇ ಪೆರೋಲ್ ಕೋರಿ ಅರ್ಜಿ ಸಲ್ಲಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ತಂದೆ ಹೆಚ್.ಡಿ. ರೇವಣ್ಣ ಅವರ ಸ್ಪಷ್ಟ ಸೂಚನೆಯ ಮೇರೆಗೆ ಪ್ರಜ್ವಲ್ ರೇವಣ್ಣ ಈ ನಿರ್ಧಾರಕ್ಕೆ ಬಂದಿದ್ದಾರೆ. ಪೆರೋಲ್‌ಗೆ ಅರ್ಜಿ ಸಲ್ಲಿಸದೆ, ಪ್ರಸ್ತುತ ಇರುವ ಪರಪ್ಪನ ಅಗ್ರಹಾರ ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ವೀಕ್ಷಿಸಲು ನಿರ್ಧರಿಸಿದ್ದಾರೆ.
ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವುದರಿಂದ, ಈ ಸೂತಕದ ಸಂದರ್ಭದಲ್ಲಿ ಹೊರಬಂದರೆ ಕುಟುಂಬಕ್ಕೆ ಹಾಗೂ ಸಾರ್ವಜನಿಕವಾಗಿ ಇರಿಸುಮುರಿಸು ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಪೆರೋಲ್‌ಗೆ ಅರ್ಜಿ ಸಲ್ಲಿಸಬಾರದು ಎಂದು ತಂದೆ ಹೆಚ್.ಡಿ. ರೇವಣ್ಣ ಅವರು ನೀಡಿದ ಸಲಹೆಯನ್ನು ಪ್ರಜ್ವಲ್ ಪಾಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಕಾನೂನು ನಿಯಮಗಳ ಪ್ರಕಾರ ಸಜಾ ಕೈದಿಗೆ ಪೆರೋಲ್ ದೊರೆಯಬೇಕಾದರೆ ಕನಿಷ್ಠ ಎರಡು ವರ್ಷಗಳ ಕಾಲ ಶಿಕ್ಷೆ ಅನುಭವಿಸಿರಬೇಕಾಗುತ್ತದೆ. ಇದರ ಜೊತೆಗೆ ಅತ್ಯಾಚಾರದಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಕೋರ್ಟ್ ಹಾಗೂ ಜೈಲು ಆಡಳಿತ ಮಂಡಳಿಯಿಂದ ಪೆರೋಲ್ ಅಥವಾ ತುರ್ತು ಜಾಮೀನು ಸಿಗುವುದು ಅತ್ಯಂತ ವಿರಳವಾಗಿದೆ.






