September 28, 2026
WhatsApp Image 2026-07-23 at 4.44.36 PM

ಮಂಗಳೂರು : ಮತದಾರರ ಪಟ್ಟಿ/ದಾಖಲಾತಿ ಪರಿಶೀಲನೆಯ (SIR) ‘ಮಿಸ್‌ಮ್ಯಾಚ್’ ನೆಪ ಒಡ್ಡಿ, ನಕಲಿ APK ಆ್ಯಪ್ ಡೌನ್‌ಲೋಡ್ ಮಾಡಿಸುವ ಮೂಲಕ 71 ವರ್ಷದ ಹಿರಿಯ ನಾಗರಿಕರೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹6,82,082 (ಆರು ಲಕ್ಷದ ಎಂಬತ್ತೆರಡು ಸಾವಿರದ ಎಂಭತ್ತೆರಡು ರೂಪಾಯಿ) ಹಣವನ್ನು ಸೈಬರ್ ಕಳ್ಳರು ಎಗರಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಜುಲೈ 17 ರಂದು ಸಂತ್ರಸ್ತ 71 ವರ್ಷದ ವೃದ್ಧರ ಮೊಬೈಲ್‌ಗೆ “ನಿಮ್ಮ SIR ಪರಿಶೀಲನೆಯು ಮಿಸ್‌ಮ್ಯಾಚ್ ಆಗಿದೆ, ತಕ್ಷಣ 8638932992 ಸಂಖ್ಯೆಯನ್ನು ಸಂಪರ್ಕಿಸಿ” ಎಂದು ಮೆಸೇಜ್ ಬಂದಿತ್ತು. ಇದನ್ನು ನಂಬಿ ಇವರು ಜುಲೈ 18 ರಂದು ಸದ್ರಿ ಸಂಖ್ಯೆಗೆ ವಾಟ್ಸ್‌ಆ್ಯಪ್ ಮೆಸೇಜ್ ಮಾಡಿದ್ದು, 48 ಗಂಟೆಗಳಲ್ಲಿ ಸಂಪರ್ಕಿಸುವುದಾಗಿ ಸೈಬರ್ ವಂಚಕರಿಂದ ಮರುಪರಿಶೀಲನಾ ಸಂದೇಶ ಬಂದಿತ್ತು.

ಜುಲೈ 20 ರಂದು ಸಂಜೆ +91 9101633409 ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಮತದಾರರ ಪರಿಶೀಲನೆ ಲಿಂಕ್ ([https://online-voters-verification-web.app/verify](https://online-voters-verification-web.app/verify)) ಕಳುಹಿಸಿ, SIR ಅಪ್ಡೇಟ್ ಮಾಡಲು ದಾಖಲೆಗಳ ವಿವರ ಪಡೆದಿದ್ದನು. ಪರಿಶೀಲನೆಯ ₹5 ಚಾರ್ಜ್ ಪಾವತಿಸುವಂತೆ ತಿಳಿಸಿದ್ದು, ಲಿಂಕ್ ಮೂಲಕ ಹಣ ಪಾವತಿಯಾಗದಿದ್ದಾಗ ಹೊಸ APK ಫೈಲ್ ಒಂದನ್ನು ಕಳುಹಿಸಿ ಡೌನ್‌ಲೋಡ್ ಮಾಡಲು ಪ್ರೇರೇಪಿಸಿದ್ದನು.

ಸಂತ್ರಸ್ತರು APK ಫೈಲ್ ಡೌನ್‌ಲೋಡ್ ಮಾಡುತ್ತಿದ್ದಂತೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಜುಲೈ 21 ರ ಬೆಳಿಗ್ಗೆ ಫೋನ್ ಆನ್ ಆಗದೇ ಇದ್ದಾಗ ಅನುಮಾನಗೊಂಡು ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ಎಚ್‌ಡಿಎಫ್‌ಸಿ ಬ್ಯಾಂಕ್ ಕದ್ರಿ ಶಾಖೆಯಲ್ಲಿದ್ದ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹6,82,082 ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

About The Author

Leave a Reply