

ಮಣಿಪಾಲ: ಹೆರ್ಗ ಗ್ರಾಮದ ಈಶ್ವರನಗರದಲ್ಲಿರುವ ಜನನಿ ಬಾರ್ & ರೆಸ್ಟೋರೆಂಟ್ ಸಮೀಪ ಯುವಕನ ಮೇಲೆ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಆ.2ರಂದು ರಾತ್ರಿ ಸುಮಾರು 11.50ರ ವೇಳೆಗೆ ಯಶ್‌ರಾಜ್ ಅವರು ತಮ್ಮ ಸಹೋದರ ಪವನ್ ಕುಮಾರ್ ಹಾಗೂ ಸ್ನೇಹಿತ ಶ್ರೇಯಸ್ ಅವರೊಂದಿಗೆ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ, ಆರೋಪಿಗಳಾದ ಅಕ್ಷಯ್ ಎ. (21), ಪುನೀತ್ ಎಸ್. (21), ಶಮಂತ್ ಕೆ.ಆರ್. (21) ಹಾಗೂ ಯಶವಂತ್ ಬಿ.ಜೆ. (21) ಎರಡು ಕಾರುಗಳಲ್ಲಿ ಬಂದು ಪವನ್ ಕುಮಾರ್ ಅವರನ್ನು ತಡೆದಿದ್ದಾರೆ. ಬಳಿಕ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಹಾಗೂ ಕಾಲಿನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮೆಟಲ್ ಪಂಚ್‌ನಿಂದ ಮುಖಕ್ಕೆ ಗುದ್ದಿದ ಪರಿಣಾಮ ಪವನ್ ಕುಮಾರ್ ಅವರ ಮೂಗಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಹಲ್ಲೆ ತಡೆಯಲು ಬಂದ ಯಶ್‌ರಾಜ್ ಹಾಗೂ ಶ್ರೇಯಸ್ ಅವರ ಮೇಲೂ ಹಲ್ಲೆ ನಡೆಸಿ, ಬಟ್ಟೆ ಹರಿದು ಜೀವ ಬೆದರಿಕೆ ಹಾಕಿ ಆರೋಪಿಗಳು ಪರಾರಿಯಾಗಿದ್ದರು.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತನಿಖೆ ವೇಳೆ ಬಂಧಿತ ನಾಲ್ವರೂ ನಿಟ್ಟೆ ಶಿಕ್ಷಣ ಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿರುವುದು ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಮಣಿಪಾಲ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ಮುಂದುವರಿಸಿದ್ದಾರೆ.






