

ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್ ಮೂಲದ 31 ವರ್ಷದ ಅದ್ವೈತ ಉಪಾಧ್ಯಾಯ ಎಂಬ ಯುವಕ ನೆಲಮಂಗಲ ತಾಲೂಕಿನ ಐತಿಹಾಸಿಕ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್‌ಗೆ ತೆರಳಿ ದಿಢೀರ್ ನಾಪತ್ತೆಯಾಗಿದ್ದಾನೆ. ಐದು ದಿನಗಳ ಹಿಂದೆ ವೈಟ್‌ಫೀಲ್ಡ್‌ನಲ್ಲಿ ಬೈಕ್ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ ಈತ, ನಿನ್ನೆ ಬೆಳಿಗ್ಗೆ ಶಿವಗಂಗೆ ಬೆಟ್ಟದ ಬಳಿ ಬೈಕ್ ಪಾರ್ಕ್ ಮಾಡಿ ಬೆಟ್ಟ ಹತ್ತಲು ಪ್ರಾರಂಭಿಸಿದ್ದಾನೆ. ಆದರೆ, ಬೆಟ್ಟಕ್ಕೆ ತೆರಳಿದ ನಂತರ ಯುವಕ ಮರಳಿ ಬಾರದೆ ನಾಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಹಾಗೂ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಯುವಕ ಬೆಟ್ಟ ಹತ್ತುತ್ತಿರುವ ದೃಶ್ಯಗಳು ಶಿವಗಂಗೆಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಆದರೆ, ಪ್ರಸ್ತುತ ಆತನ ಮೊಬೈಲ್ ಫೋನ್ ಸಂಪೂರ್ಣವಾಗಿ ಸ್ವಿಚ್ ಆಫ್ ಆಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ (ಮಿಸ್ಸಿಂಗ್ ಕೇಸ್) ದಾಖಲಾಗಿದ್ದು, ಯುವಕನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ನಾಪತ್ತೆಯಾದ ಅದ್ವೈತ ಉಪಾಧ್ಯಾಯನಿಗಾಗಿ ನೆಲಮಂಗಲ ಹಾಗೂ ದಾಬಾಸ್‌ಪೇಟೆ ಠಾಣೆಯ ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಶಿವಗಂಗೆ ಬೆಟ್ಟದ ಕಡಿದಾದ ಹಾಗೂ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಯುವಕನ ಸುಳಿವು ಪತ್ತೆ ಹಚ್ಚಲು ಪೊಲೀಸರು ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಇಂಚಿಂಚೂ ಜಾಗವನ್ನು ಪರಿಶೀಲಿಸುತ್ತಿದ್ದಾರೆ. ಯುವಕ ಕಾಲು ಜಾರಿ ಬಿದ್ದಿದ್ದಾನೆಯೇ ಅಥವಾ ಬೇರೆ ಎಲ್ಲಾದರೂ ಸಿಲುಕಿಕೊಂಡಿದ್ದಾನೆಯೇ ಎಂಬ ಕೋನದಲ್ಲಿ ಶೋಧ ಕಾರ್ಯ ಭರದಿಂದ ಸಾಗಿದೆ.







