

ಬೆಂಗಳೂರು: ಅಲ್ಪಸಂಖ್ಯಾತ ಇಲಾಖೆಯಿಂದ ವಿವಿಧ ಹಂತದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೆನಗುದಿಗೆ ಬಿದ್ದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಗುರುವಾರ ವಸಂತ ನಗರದ ಅಲ್ಪಸಂಖ್ಯಾತರ ನಿರ್ದೇಶನಾಲಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿ ವೇತನ ಬಿಡುಗಡೆ ಆಗಿಲ್ಲ ಎನ್ನುವ ಮಾಹಿತಿ ಇದೆ. ಈ ಸಂಬಂಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದರು.
ಇನ್ನೂ ಕೆಪಿಎಸ್ಸಿ ಪರೀಕ್ಷೆ ಪದ್ಧತಿಯಲ್ಲಿ ಪಾದರರ್ಶಕತೆ ತರುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವರದಿ ನೀಡಲು ಸದನ ಸಮಿತಿಯನ್ನು ರಚಿಸಲಾಗಿದೆ. ಶೀಘ್ರದಲ್ಲೇ ಸಭೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಶುಲ್ಕ ನಿಗಧಿ ಕುರಿತು ಸಭೆಯ ನಂತರ ತೀರ್ಮಾನವಾಗಲಿದೆ ಎಂದು ಯುಟಿ ಖಾದರ್ ತಿಳಿಸಿದರು.ವಿಪಕ್ಷಕ್ಕೆ ಆರೋಗ್ಯ ಏರುಪೇರಾದರೆ ಉಚಿತ Standing: ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಧಾನಮಂಡಲ ಸದನ ನಡೆಸಲಾಗುತ್ತದೆ. ಆದರೆ ಬಿಜೆಪಿಯವರು ಈ ಬಾರಿಯ ಮಳೆಗಾಲ ಅಧಿವೇಶನವನ್ನು ಪ್ರತಿಭಟನೆಯ ವೇದಿಕೆಯನ್ನಾಗಿ ಮಾಡಿಕೊಂಡಿದಲ್ಲದೆ, ಬೊಬ್ಬೆ ಹೊಡೆದರು.ಈಗ ಪಾದಯಾತ್ರೆ ನಡೆಸಲಿದ್ದು, ಅಲ್ಲಿ ಯಾರಿಗಾದರು ಆರೋಗ್ಯದಲ್ಲಿ ಏರುಪೇರಾದರೆ ಆರೋಗ್ಯ ಇಲಾಖೆಯಿಂದ ಸಮರ್ಪಕವಾಗಿ ಉಚಿತ ಚಿಕಿತ್ಸೆ ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದು ಯು.ಟ.ಖಾದರ್ ವ್ಯಂಗ್ಯವಾಡಿದರು.

ಪಿಎಚ್‌ಡಿ ಸಹಾಯ ಧನ ಹೆಚ್ಚಳಕ್ಕೆ ಕ್ರಮ: ಈಹಿಂದೆ ಅಲ್ಪಸಂಖ್ಯಾತ ಸಮುದಾಯದ ಪಿಎಚ್‌ಡಿ ಸಂಶೋಧಕರಿಗೆ ಪ್ರತಿ ಮಾಸಿಕ 25 ಸಾವಿರ ರೂ. ಸಹಾಯ ಧನ ನೀಡಲಾಗುತಿತ್ತು. ಆದರೆ, ಬಿಜೆಪಿ ಸರಕಾರ ಬಂದು ಈ ಮೊತ್ತವನ್ನು 10 ಸಾವಿರಕ್ಕೆ ಇಳಿಸಿದರು. ಇದನ್ನು ಮತ್ತೆ ಹೆಚ್ಚಿಸುವ ಸಲುವಾಗಿ ಪಿಎಚ್‌ಡಿ ಸಂಶೋಧಕರೊಂದಿಗೆ ಸಭೆ ನಡೆಸಲಾಗುವುದು. ಆನಂತರ, ಮೊತ್ತ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.






