August 29, 2026
WhatsApp Image 2026-08-29 at 9.25.45 AM

ಪುತ್ತೂರು: ದರ್ಬೆಯ ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಸುಟ್ಟುಹೋದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದ ಹಾಗೂ ಹಲ್ಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇವಲ ₹300 ವಿಚಾರಕ್ಕೆ ನಡೆದ ಮಾತಿನ ಚಕಮಕಿ ಬಳಿಕ ಪ್ರಕರಣ ಕೋಮು ವೈಷಮ್ಯದ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಸಂತ್ರಸ್ತೆ ಯುವತಿ ಮುಬಾಶಿರಾ ಅವರು ಪ್ರಕರಣವನ್ನು ರಾಜಕೀಯಗೊಳಿಸದೆ ಇಲ್ಲಿಗೆ ಅಂತ್ಯಗೊಳಿಸುವಂತೆ ಮನವಿ ಮಾಡಿದ್ದಾರೆ.

ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಮುಬಾಶಿರಾ, “ಬೇಕಿದ್ದರೆ ನಾವು ಕೇಸ್ ವಾಪಸ್ ತೆಗೆದುಕೊಳ್ಳುತ್ತೇವೆ. ಗಲಭೆ ಬೇಡ. ನಮ್ಮ ವಿಚಾರವನ್ನು ಮುಂದಿಟ್ಟುಕೊಂಡು ಯಾರೂ ರಾಜಕೀಯ ಲಾಭ ಪಡೆಯುವುದು ಬೇಡ” ಎಂದು ತಿಳಿಸಿದ್ದಾರೆ.

“ಹಿಂದೂ-ಮುಸ್ಲಿಂ, ಕಾಂಗ್ರೆಸ್, ಬಿಜೆಪಿ, ಎಸ್ಡಿಪಿಐ ಎಂದು ಪ್ರಕರಣವನ್ನು ವಿಭಜಿಸುವುದು ನಮಗೆ ಬೇಕಿಲ್ಲ. ಇಷ್ಟು ಚಿಕ್ಕ ವಿಚಾರ ಇಷ್ಟು ದೊಡ್ಡದಾಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಈ ಪ್ರಕರಣವನ್ನು ಇಲ್ಲಿಗೆ ಕೈಬಿಡಿ, ಗಲಾಟೆ ಮಾಡುವುದು ಬೇಡ” ಎಂದು ಅವರು ಮನವಿ ಮಾಡಿದ್ದಾರೆ.

ಘಟನೆ ನಡೆದ ಸಂದರ್ಭದ ಬಗ್ಗೆ ಮಾತನಾಡಿದ ಮುಬಾಶಿರಾ, “ಘಟನೆ ನಡೆದಾಗ ಅಂಗಡಿಯವರೇ ನಮಗೆ ಹೊಡೆದರು. ನಾವು ಅಲ್ಲಿ ಏನೂ ಮಾಡಿಲ್ಲ. ಬಳಿಕ ನೇರವಾಗಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದೇವೆ. ಆ ನಂತರ ಅಲ್ಲಿ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.

ಅಲ್ಲದೆ, “ಅಲ್ಲಿ ಗಲಾಟೆ ನಡೆಸಿದವರು ನಮ್ಮ ಪರಿಚಯದವರೂ ಅಲ್ಲ, ನಮ್ಮ ಊರಿನವರೂ ಅಲ್ಲ. ಆದ್ದರಿಂದ ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ಹಿಂದೂ-ಮುಸ್ಲಿಂ ಗಲಾಟೆ ಆಗಬೇಕೆಂಬ ಇಷ್ಟವೂ ನಮಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ನಮಗೆ ಹೊಡೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಮ್ಮ ಆಸ್ಪತ್ರೆ ಖರ್ಚು-ವೆಚ್ಚ ನೀಡಿದರೆ ಸಾಕು. ಬೇರೇನೂ ನಮಗೆ ಬೇಡ” ಎಂದು ಮುಬಾಶಿರಾ ತಿಳಿಸಿದ್ದಾರೆ.

ಮುಬಾಶಿರಾ ಕುಟುಂಬದವರು ಜೆರಾಕ್ಸ್ ಅಂಗಡಿಯಲ್ಲಿ ಲ್ಯಾಮಿನೇಷನ್ ಮಾಡಿಸಲು ಜನನ ಪ್ರಮಾಣಪತ್ರವನ್ನು ನೀಡಿದ್ದರು ಎನ್ನಲಾಗಿದೆ. ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ಪ್ರಮಾಣಪತ್ರ ಸುಟ್ಟುಹೋಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಘಟನೆ ಹಲ್ಲೆಗೆ ತಿರುಗಿತ್ತು ಎಂದು ತಿಳಿದುಬಂದಿದೆ.

ಈ ಪ್ರಕರಣ ಇದೀಗ ಕೋಮು ಸಂಘರ್ಷದ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, “ಗಲಾಟೆ ಬೇಡ, ರಾಜಕೀಯ ಮಾಡಬೇಡಿ” ಎಂಬ ಸಂತ್ರಸ್ತೆ ಮುಬಾಶಿರಾ ಅವರ ಮನವಿ ಮಹತ್ವ ಪಡೆದುಕೊಂಡಿದೆ.

About The Author

Leave a Reply