August 29, 2026
WhatsApp Image 2026-08-29 at 9.28.04 AM

ಮಂಗಳೂರು: ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು 21 ವರ್ಷ ಪ್ರಾಯದೊಳಗಿನ ವ್ಯಕ್ತಿಗಳಿಗೆ ಮಾರಾಟ ಮಾಡುವಂತಿಲ್ಲ ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ. ತಿಳಿಸಿದ್ದಾರೆ.ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ದ.ಕ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ 2024ಕ್ಕೆ ತಂದಿರುವ ತಿದ್ದುಪಡಿಯ ಅನ್ವಯ 21 ವರ್ಷ ಪ್ರಾಯದೊಳಗಿನವರಿಗೆ ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಲಾಗಿದೆ. ಅದಲ್ಲದೆ ಸಿಗರೇಟ್ ಚಿಲ್ಲರೆಯಾಗಿ ಮಾರುವುದನ್ನೂ ಹಾಗೂ ಶಾಲಾ-ಕಾಲೇಜುಗಳ 100 ಮೀ. ಅಂತರದಲ್ಲಿ ಅವುಗಳ ಮಾರಾಟವನ್ನು ನಿಷೇಧಿಸಲಾಗಿದೆ. ಅಂಗಡಿಗಳಲ್ಲಿ ಅವುಗಳನ್ನು ಮಾರಾಟ ಮಾಡುವವರಿಗೂ 21 ವರ್ಷವಾಗಿರಬೇಕು ಎಂದು ರಾಜು ಹೇಳಿದರು. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲಾ ನಗರ ಸ್ಥಳೀಯ ಸಂಸ್ಥೆ ಗ್ರಾಪಂಗಳು ಅಂಗಡಿ, ಹೊಟೇಲ್, ಕೆಫೆಗಳಲ್ಲಿ ನಿರಂತರ ತಪಾಸಣೆ ನಡೆಸಬೇಕು. ಅಪ್ರಾಪ್ತರಿಗೆ ಸಿಗರೇಟ್ ಮಾರಾಟ ಕಂಡು ಬಂದರೆ, ಅವುಗಳ ಲೈಸನ್ಸ್ ರದ್ದು ಮಾಡಬೇಕು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ/ಗ್ರಾಪಂ ಮತ್ತು ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಿಗರೇಟ್ ಗಳನ್ನು ಇಡೀ ಪ್ಯಾಕ್ ನಲ್ಲಿ ಮಾರಾಟ ಮಾಡಬೇಕು. ಪ್ಯಾಕ್ ತೆರೆದು ಸಿಂಗಲ್ ಆಗಿ ಸಿಗರೇಟ್ ಮಾರಲು ಕಾನೂನಿನಲ್ಲಿ ಅವಕಾಶ ಇಲ್ಲ. ಸಿಗರೇಟ್ ಸೇದುವವರಿಗೆ ಅನುಕೂಲವಾಗಲು ಲೈಟರ್ ಅಥವಾ ಬೆಂಕಿಪೆಟ್ಟಿಗೆ ಇಡುವವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಎಳೆಯುವುದು, ತಂಬಾಕು ತಿಂದು ಉಗಿಯುವುದು ಕಂಡು ಬಂದರೆ ಅವರಿಗೆ ನಿಯಮಾನುಸಾರ 1,000 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಆಗಾಗ ಕಾರ್ಯಾಚರಣೆ ನಡೆಸಿ ತಪಾಸಣೆ ನಡೆಸಬೇಕು. ಈ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡುವಂತೆ ಅಪರ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್‌ ಗಳನ್ನು ಆಗಾಗ ಪರಿಶೀಲಿಸುವಂತೆ ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆಗೆ ಸೂಚಿಸಿದ ಅವರು, ಶಿಕ್ಷಣ ಸಂಸ್ಥೆಗಳ 100 ಮೀ ವ್ಯಾಪ್ತಿಯೊಳಗಿರುವ ಅಂಗಡಿಗಳಲ್ಲಿ ಸಿಗರೇಟ್-ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನಿಗಾ ವಹಿಸಬೇಕು. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು, ಎಸ್ಟಿಎಂಸಿಗಳು ‘ತಂಬಾಕು ಮುಕ್ತ ಶಾಲೆ’ಗಳೆಂದು ಪ್ರತಿ ತಿಂಗಳು ದೃಢಢೀಕರಣ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಜು ತಿಳಿಸಿದರು.ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ ಧೂಮಪಾನ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಅಂಗಡಿ, ಹೊಟೇಲ್ಗಳಿಗೆ ಲೈಸನ್ಸ್ ನೀಡುವಾಗ ತಂಬಾಕು ನಿಯಂತ್ರಣ ಕಾಯ್ದೆಯ ಷರತ್ತು ಮತ್ತು ನಿಬಂಧನೆಗಳನ್ನು ನಮೂದಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅಪರ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಿರೆಡ್ಡಿ, ಎಸಿಪಿ ನಝಾಫಾರೂಖಿ, ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್‌, ಜಿಲ್ಲಾ ತಂಬಾಕು ನಿಯಂತ್ರಣ ಕೋಶ.

About The Author

Leave a Reply