September 1, 2026
WhatsApp Image 2026-09-01 at 10.26.27 AM

ಮಂಗಳೂರಿನಲ್ಲಿ ಆಟೋರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (RTA) ಅಧ್ಯಕ್ಷರಾದ ದರ್ಶನ್ ಎಚ್.ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಹೊಸ ದರದ ಅನ್ವಯ, ಇನ್ನು ಮುಂದೆ ಗರಿಷ್ಠ ಮೂವರು ಪ್ರಯಾಣಿಕರಿಗೆ ಅನ್ವಯಿಸುವಂತೆ ಕನಿಷ್ಠ 1.5 ಕಿಲೋಮೀಟರ್‌ ಪ್ರಯಾಣಕ್ಕೆ ₹40 ದರವನ್ನು ನಿಗದಿಪಡಿಸಲಾಗಿದ್ದು, ನಂತರದ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ ₹20 ಶುಲ್ಕ ವಿಧಿಸಲು ಅವಕಾಶ ನೀಡಲಾಗಿದೆ.

ಈ ಮೊದಲು ಮಂಗಳೂರಿನಲ್ಲಿ ಆಟೋಗಳ ಕನಿಷ್ಠ ಪ್ರಯಾಣ ದರ ₹35 ಹಾಗೂ ನಂತರದ ಪ್ರತಿ ಕಿಲೋಮೀಟರ್‌ಗೆ ₹17 ಆಗಿತ್ತು. ಕಳೆದ ನಾಲ್ಕು ವರ್ಷಗಳಿಂದ ದರ ಪರಿಷ್ಕರಣೆಯಾಗದ ಹಿನ್ನೆಲೆಯಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿ ಎಲ್.ಪಿ.ಜಿ, ಸಿ.ಎನ್‌.ಜಿ, ಇಂಧನ ದರ ಹಾಗೂ ಬಿಡಿಭಾಗಗಳ ವೆಚ್ಚ ಗಣನೀಯವಾಗಿ ಹೆಚ್ಚಿರುವುದರಿಂದ ದರ ಏರಿಕೆ ಮಾಡುವಂತೆ ಆಟೋ ಚಾಲಕ-ಮಾಲಕರ ಸಂಘಟನೆಗಳು ನಿರಂತರವಾಗಿ ಮನವಿ ಸಲ್ಲಿಸಿದ್ದವು. ಈ ಕುರಿತು ಆಟೋ ಚಾಲಕರ ಬೇಡಿಕೆ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು RTA ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಈ ಹೊಸ ದರಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಪರಿಷ್ಕೃತ ನಿಯಮದಂತೆ ಆಟೋ ಕಾಯುವಿಕೆ ಶುಲ್ಕದಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಮೊದಲ 10 ನಿಮಿಷ ಕಾಯುವಿಕೆ ಸಂಪೂರ್ಣ ಉಚಿತವಾಗಿರುತ್ತದೆ ಹಾಗೂ ತದನಂತರದ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ ₹5 ನಿಗದಿಪಡಿಸಲಾಗಿದೆ. ಲಗೇಜ್‌ಗೆ ಸಂಬಂಧಿಸಿದಂತೆ ಒಬ್ಬ ಪ್ರಯಾಣಿಕ ಉಚಿತವಾಗಿ 20 ಕೆ.ಜಿ.ವರೆಗೆ ಲಗೇಜ್ ಒಯ್ಯಲು ಅವಕಾಶವಿದ್ದು, ಹೆಚ್ಚುವರಿ 20 ಕೆ.ಜಿ.ಗೆ ಅಥವಾ ಅದರ ಭಾಗಕ್ಕೆ ₹5 ಶುಲ್ಕ ಪಡೆಯಬಹುದು. ಇನ್ನು ರಾತ್ರಿ 10.00 ಗಂಟೆಯಿಂದ ಬೆಳಗಿನ ಜಾವ 5.00 ಗಂಟೆಯವರೆಗಿನ ಪ್ರಯಾಣಕ್ಕೆ ಚಾಲ್ತಿಯಲ್ಲಿರುವ ಮೀಟರ್ ದರದ ಒಂದೂವರೆ ಪಟ್ಟು ದರ ವಸೂಲಿ ಮಾಡಲು ಅನುಮತಿ ನೀಡಲಾಗಿದೆ.

ಪ್ರತಿಯೊಂದು ಆಟೋರಿಕ್ಷಾದಲ್ಲೂ ಹೊಸ ದರಪಟ್ಟಿಯನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ ಚಾಲಕರು ತಮ್ಮ ಆಟೋ ಮೀಟರ್‌ಗಳನ್ನು ತಕ್ಷಣವೇ ಪರಿಷ್ಕರಿಸಿ ಸೀಲ್ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ನಿಯಮ ಉಲ್ಲಂಘಿಸುವ ಹಾಗೂ ಸಾರ್ವಜನಿಕರಿಂದ ಹೆಚ್ಚಿನ ದರ ವಸೂಲಿ ಮಾಡುವ ಆಟೋ ಚಾಲಕರ ವಿರುದ್ಧ ಪರವಾನಗಿ ರದ್ದು ಸೇರಿದಂತೆ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಎಚ್ಚರಿಸಿದೆ.

About The Author

Leave a Reply