

ಕುಂದಾಪುರ : ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ, 8 ಮಂದಿ ಶಾಲಾ ಮಕ್ಕಳ ಬಲಿತೆಗೆದುಕೊಂಡ ಕುಂದಾಪುರ ಸಮೀಪದ ಮೊವಾಡಿ ಕ್ರಾಸ್‌ನ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ 10 ವರ್ಷಗಳ ತನಿಖೆ ಹಾಗೂ ವಿಚಾರಣೆಯ ಬಳಿಕ ಕುಂದಾಪುರದ ನ್ಯಾಯಾಲಯ ಬುಧವಾರ ಅಂತಿಮ ತೀರ್ಪು ಪ್ರಕಟಿಸಿದೆ.
ಪ್ರಕರಣದ ಮುಖ್ಯ ಆರೋಪಿ, ಖಾಸಗಿ ಬಸ್ ಚಾಲಕ ಮಂಜುನಾಥ್‌ಗೆ 1 ವರ್ಷ 17 ದಿನಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 12,500 ರೂ. ದಂಡ ವಿಧಿಸಿ ಕುಂದಾಪುರದ 3ನೇ ಹೆಚ್ಚುವರಿ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಣಿಕಂಠ ಎಂ.ಎಸ್. ಆದೇಶಿಸಿದ್ದಾರೆ.
2016ರ ಜೂನ್ 21ರಂದು ಬೆಳಿಗ್ಗೆ 9:25ರ ಸುಮಾರಿಗೆ ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸಮೀಪದ ಮೊವಾಡಿ ಕ್ರಾಸ್ ಬಳಿ ಈ ದುರಂತ ಸಂಭವಿಸಿತ್ತು. ಶಾಲೆಯ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಓಮ್ನಿ ಕಾರನ್ನು ಚಾಲಕ ಅವರು ಶಾಲೆಯ ರಸ್ತೆಯತ್ತ ತಿರುಗಿಸುತ್ತಿದ್ದ ವೇಳೆ, ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಖಾಸಗಿ ಬಸ್ ನೇರವಾಗಿ ಡಿಕ್ಕಿ ಹೊಡೆದಿತ್ತು.

ಈ ಭೀಕರ ಅಪಘಾತದಲ್ಲಿ ಓಮ್ನಿಯಲ್ಲಿದ್ದ 8 ವಿಧ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡು ಸಾವನಪ್ಪಿದ್ದರು, ಈ ಘಟನೆಯಲ್ಲಿ ಇನ್ನು ಕೆಲ ಮಕ್ಕಳು ಗಂಭೀರ ಗಾಯಗೊಂಡಿದ್ದರು.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಅಂದಿನ ಬೈಂದೂರು ಸಿಪಿಐ ಸುದರ್ಶನ್ ಹಾಗೂ ಸಿಪಿಐ ರಾಘವ ಎಸ್. ಪಡೀಲ್ ಅವರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ಅವರು ಸರ್ಕಾರದ ಪರ ಸುದೀರ್ಘ ವಾದ ಮಂಡಿಸಿದ್ದರು.
ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆರೋಪಿ ಮಂಜುನಾಥ್ ತಪ್ಪಿತಸ್ಥನೆಂದು ನಿರ್ಧರಿಸಿ ಶಿಕ್ಷೆ ವಿಧಿಸಿದೆ. ದುರಂತದ ಬಳಿಕ ಚಾಲಕ ವೃತ್ತಿ ತೊರೆದು ಹುಬ್ಬಳ್ಳಿಯಲ್ಲಿ ಕೃಷಿ ಮಾಡಿಕೊಂಡಿದ್ದ ಮಂಜುನಾಥ್‌ಗೆ, ಈ ತೀರ್ಪಿನ ವಿರುದ್ಧ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ (Appeal) ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಮೇಲ್ಮನವಿ ಸಲ್ಲಿಸದಿದ್ದಲ್ಲಿ ಅರೆಸ್ಟ್ ವಾರಂಟ್ ಜಾರಿಯಾಗಲಿದೆ.






