September 15, 2026
WhatsApp Image 2026-09-15 at 5.09.58 PM

ಮಂಗಳೂರು: ಇದೇ ಸೆಪ್ಟಂಬರ್ 18ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಮಹತ್ವದ ತೀರ್ಮಾನ ಹೊರಬೀಳಲಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಪ್ರಮುಖ ಬೇಡಿಕೆಗಳು ಹಾಗೂ ತುಳು ಭಾಷೆಗೆ ಸಿಗಲಿರುವ ಮಾನ್ಯತೆಯ ಪ್ರಕ್ರಿಯೆಗಳ ಕುರಿತು ವಿವರಗಳನ್ನು ಹಂಚಿಕೊಂಡರು.

ತುಳು ಭಾಷೆಯ ಮಾನ್ಯತೆಗಾಗಿ ನಡೆಸಿದ ನಿರಂತರ ಪ್ರಯತ್ನಗಳನ್ನು ಸ್ಮರಿಸಿದ ಶಾಸಕರು, “ನಾನು ಮೊದಲ ಬಾರಿಗೆ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದ ದಿನದಿಂದಲೂ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂದು ಸದನದಲ್ಲಿ ಪ್ರಬಲವಾಗಿ ಒತ್ತಾಯಿಸುತ್ತಾ ಬಂದಿದ್ದೇನೆ. ಕಳೆದ ಮೂರು ವರ್ಷಗಳಿಂದ ಈ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆದಿದೆ. ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಿದ ಮಾದರಿಯನ್ನು ಅಧ್ಯಯನ ಮಾಡಲು ನಮ್ಮ ಸ್ವಂತ ಖರ್ಚಿನಲ್ಲಿ ವಿಶೇಷ ತಂಡಗಳನ್ನು ಕಳುಹಿಸಿ ವರದಿ ತರಿಸಿಕೊಳ್ಳಲಾಗಿತ್ತು” ಎಂದು ತಿಳಿಸಿದರು.

ಈಗಾಗಲೇ ಪ್ರಕ್ರಿಯೆಗಳು ಅಂತಿಮ ಹಂತ ತಲುಪಿದ್ದು, ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಕಡತಕ್ಕೆ ಕಾನೂನು ಇಲಾಖೆಯಿಂದ ಅನುಮೋದನೆ ದೊರೆತಿದೆ. ಮಂಗಳವಾರ ಹಣಕಾಸು ಇಲಾಖೆಯ ಅನುಮೋದನೆಯೂ లಭ್ಯವಾಗಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಈಗಾಗಲೇ ಮಾತನಾಡಿದ್ದು, ಅವರೂ ಸಹ ಈ ನಿರ್ಧಾರಕ್ಕೆ ಪೂರ್ಣ ಸಮ್ಮತಿ ಸೂಚಿಸಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು.

ಮುಂದಿನ ಪ್ರಕ್ರಿಯೆಗಳ ಕುರಿತು ವಿವರಿಸಿದ ಅವರು, “ಬುಧವಾರ ಹಾಗೂ ಗುರುವಾರ ಬೆಂಗಳೂರಿನಲ್ಲಿ ಕುಳಿತು ಕ್ಯಾಬಿನೆಟ್ ನೋಟ್ ಸಿದ್ಧಪಡಿಸಿ, ಮುಖ್ಯಮಂತ್ರಿಗಳಿಂದ ಸಹಿ ಮಾಡಿಸಿ ಸೆ. 18ರ ಸಂಪುಟ ಸಭೆಯ ಮುಂದೆ ತರಲಾಗುವುದು. ಅಂದು ಮುಖ್ಯಮಂತ್ರಿಗಳು ಇದನ್ನು ಅಧಿಕೃತವಾಗಿ 100% ಘೋಷಣೆ ಮಾಡಲಿದ್ದಾರೆ. ಈ ಐತಿಹಾಸಿಕ ನಿರ್ಧಾರದ ಮೂಲಕ ದೇಶ-ವಿದೇಶಗಳಲ್ಲಿರುವ ಸಮಸ್ತ ತುಳುವರ ದಶಕಗಳ ಸುದೀರ್ಘ ಕನಸು ನನಸಾಗಲಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ತುಳು ಭಾಷೆಯ ಮಾನ್ಯತೆಯಷ್ಟೇ ಅಲ್ಲದೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಪ್ರಸ್ತಾವನೆಗಳನ್ನು ಸರ್ಕಾರದ ಮುಂದಿಡಲಾಗಿದೆ. ಸರ್ಕಾರಿ ಜಾಗದಲ್ಲಿರುವ ಪುರಾತನ ದೇವಸ್ಥಾನಗಳು, ಗರಡಿಗಳು ಹಾಗೂ ದೈವಸ್ಥಾನಗಳ ಭೂಮಿಯನ್ನು ಸಕ್ರಮಗೊಳಿಸುವುದು ಮತ್ತು ಮಠ-ಮಂದಿರಗಳಿಗೆ ಸೂಕ್ತ ಅನುದಾನ ಬಿಡುಗಡೆ ಮಾಡುವುದು ಸೇರಿದೆ. ಜೊತೆಗೆ ‘ದಕ್ಷಿಣ ಕನ್ನಡ’ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯೂ ಇರಲಿದ್ದು, ಕರಾವಳಿಯ ಪಾಲಿಗೆ ಸೆಪ್ಟಂಬರ್ 18ರ ಸಂಪುಟ ಸಭೆ ಐತಿಹಾಸಿಕ ದಿನವಾಗಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

About The Author

Leave a Reply