

ಮುಂಬೈ ವಿಮಾನ ನಿಲ್ದಾಣಕ್ಕೆ ಕರ್ತವ್ಯಕ್ಕೆ ತೆರಳುತ್ತಿದ್ದ ಇಂಡಿಗೋ ಏರ್ಲೈನ್ಸ್‌ನ 34 ವರ್ಷದ ಕ್ಯಾಬಿನ್ ಸಿಬ್ಬಂದಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ, ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಕಾರೊಂದು ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಮಿಸ್ತಿ ಎಂದು ಗುರುತಿಸಲಾಗಿದೆ. ಅವರಿಗೆ ಐದು ವರ್ಷದ ಮಗನಿದ್ದು, ಪತಿಯಿಂದ ಬೇರ್ಪಟ್ಟಿದ್ದ ಅವರು ಮಗನನ್ನು ಏಕಾಂಗಿಯಾಗಿ ಸಾಕುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವರ ಹಠಾತ್ ಸಾವಿನಿಂದ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ದುರ್ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.






