

ಮಂಗಳೂರು: ನವರಾತ್ರಿ ಉತ್ಸವ, ಶಾರದೋತ್ಸವ ಹಾಗೂ ಶೋಭಾಯಾತ್ರೆಗಳು ವಿಜೃಂಭಣೆಯಿಂದ ನಡೆಯುತ್ತಿರುವ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಮುನ್ನೆಚ್ಚರಿಕೆ ಭಾಗವಾಗಿ ಮದ್ಯ ಮಾರಾಟವನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಿಸಲಾಗಿದೆ.
ಈ ನಿಟ್ಟಿನಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಗೆ ಬರುವ ಆಯಾ ಪ್ರದೇಶಗಳಲ್ಲಿ ಬಾರ್ಗಳು ಮತ್ತು ವೈನ್ ಶಾಪ್ಗಳು ಸೇರಿದಂತೆ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ (DC) ದರ್ಶನ್ ಹೆಚ್.ವಿ. ಅವರು ಆದೇಶ ಹೊರಡಿಸಿದ್ದಾರೆ. ಆಯಾ ಪ್ರದೇಶಗಳಲ್ಲಿ ಶೋಭಾಯಾತ್ರೆ ಮತ್ತು ಮೆರವಣಿಗೆ ಜರುಗುವ ದಿನದಂದು ಮಧ್ಯಾಹ್ನ 4:00 ಗಂಟೆಯಿಂದ ಮಧ್ಯರಾತ್ರಿ 12:00 ಗಂಟೆಯವರೆಗೆ ಈ ಮದ್ಯ ಮಾರಾಟ ನಿಷೇಧವು ಜಾರಿಯಲ್ಲಿರಲಿದೆ.






