

ಮಂಗಳೂರು: ಬೋಳಿಯಾರ್ ಸಮೀಪದ ಕುರ್ನಾಡು ಪೆಟ್ರೋಲ್ ಪಂಪ್ ಬಳಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಬಂದ ಪಿಕಪ್ ಢಿಕ್ಕಿ ಹೊಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಸಹಸವಾರ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಮೃತಪಟ್ಟ ಯುವಕರನ್ನು ಕಿನ್ಯ ಅರೆಬಿನಗರದ ಮಹಮ್ಮದ್ ಅರ್ಫಾಝ್ (22) ಹಾಗೂ ಕಿನ್ಯ ಉಕ್ಕುಡ ನಿವಾಸಿ ಜುನೈದ್ (23) ಎಂದು ಗುರುತಿಸಲಾಗಿದೆ.

ಸೋಮವಾರ ಸಂಜೆ ಬೋಳಿಯಾರ್ ಕಡೆಯಿಂದ ಮುಡಿಪು ಕಡೆಗೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ಪಿಕಪ್ ವಾಹನವು ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ಢಿಕ್ಕಿ ಹೊಡೆದಿದೆ. ಮೃತ ಜುನೈದ್ ಕಲ್ಲಾಪು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅರ್ಫಾಝ್ ಮುಂಬೈಯಲ್ಲಿ ಕೆಲಸದಲ್ಲಿದ್ದು ಇತ್ತೀಚಿಗೆ ಊರಿಗೆ ಬಂದಿದ್ದ ಎನ್ನಲಾಗಿದೆ.
ಅಪಘಾತ ನಡೆದ ತಕ್ಷಣವೇ ಪಿಕಪ್ ಚಾಲಕ ಡೋರ್ ತೆಗೆದು ಪರಾರಿಯಾಗಿದ್ದು, ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







