

ಕಾಸರಗೋಡು: ಎಸ್ಡಿಪಿಐ ಕಾರ್ಯಕರ್ತ ಸೈನುಲ್ ಆಬಿದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 20 ಆರೋಪಿಗಳನ್ನು ಖುಲಾಸೆಗೊಳಿಸಿದೆ. 2014ರಲ್ಲಿ ನಡೆದಿದ್ದ ಈ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.
2014ರ ಡಿಸೆಂಬರ್ 22ರಂದು ಕಾಸರಗೋಡು ಹಳೆಯ ಬಸ್ ನಿಲ್ದಾಣದ ಸಮೀಪದ ಅಂಗಡಿಯಲ್ಲಿ ತಂದೆಯೊಂದಿಗೆ ಇದ್ದ ಸೈನುಲ್ ಆಬಿದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಡಿಸೆಂಬರ್ 23ರಂದು ಮೃತಪಟ್ಟಿದ್ದರು.
ಪ್ರಕರಣದಲ್ಲಿ ಆರಂಭದಲ್ಲಿ 21 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಎಂಟನೇ ಆರೋಪಿ ಮೃತಪಟ್ಟಿದ್ದರಿಂದ ಉಳಿದ 20 ಆರೋಪಿಗಳು ವಿಚಾರಣೆ ಎದುರಿಸಿದ್ದರು.

ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಸೈನುಲ್ ಆಬಿದ್ ಅವರ ತಂದೆ ಕೆ.ಎ. ಮೊಹಮ್ಮದ್ ಕುಂಞಿ ಅವರು ವಿಚಾರಣೆ ಪೂರ್ಣಗೊಳ್ಳುವ ಮೊದಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೂ ಸೇರಿದಂತೆ ಸಾಕ್ಷ್ಯಾಧಾರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಪ್ರಾಸಿಕ್ಯೂಷನ್ಗೆ ಹಿನ್ನಡೆಯಾದವು.
ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮೃತ ಸೈನುಲ್ ಆಬಿದ್ ಅವರ ಕುಟುಂಬದವರು ತಿಳಿಸಿದ್ದಾರೆ






