October 18, 2026
WhatsApp Image 2026-10-16 at 12.03.23 PM

ಮಂಗಳೂರು: ಅಪ್ರಾಪ್ತ ವಯಸ್ಸಿನ  ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನ ಪಾದ್ರಿ ಫಾದರ್ ಸಿಪ್ರಿಯನ್ ಪಿಂಟೋ ಅವರನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಕಲೇಶಪುರದಲ್ಲಿರುವ ಸಂಬಂಧಿಕರ ನಿವಾಸದಲ್ಲಿ ಅಡಗಿಕೊಂಡಿದ್ದ ಪಾದ್ರಿಯನ್ನು ಪತ್ತೆಹಚ್ಚಿದ ಪೊಲೀಸರು ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ. ಇಬ್ಬರು ಅಪ್ರಾಪ್ತ ಬಾಲಕರು ನೀಡಿದ ದೂರಿನ ಮೇರೆಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಪಾದ್ರಿ ನಾಪತ್ತೆಯಾಗಿದ್ದರು ಎನ್ನಲಾಗಿದೆ.

ಇದಕ್ಕೂ ಮೊದಲು ಪಾದ್ರಿಯನ್ನು ಪತ್ತೆಹಚ್ಚಲು ಪೊಲೀಸರು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಚರ್ಚ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕರಿಗೆ ಚಾಕೊಲೇಟ್ ನೀಡುವ ಮೂಲಕ ಪರಿಚಯ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಅವರ ವಿರುದ್ಧ ಕೇಳಿಬಂದಿದೆ.

ಪಾದ್ರಿಯ ವರ್ತನೆಯ ಕುರಿತು ಮಕ್ಕಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಬಳಿಕ ಈ ವಿಚಾರ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಅವರ ಗಮನಕ್ಕೂ ಬಂದಿತ್ತು. ನಂತರ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಮಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿತ್ತು. ಆ ಬಳಿಕ ಸಂತ್ರಸ್ತ ಬಾಲಕರ ಕುಟುಂಬದವರೂ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಸದ್ಯ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪಾದ್ರಿ ವಿರುದ್ಧ ಮಾಡಲಾಗಿರುವ ಆರೋಪಗಳು ಸಾಬೀತಾಗಿವೆಯೇ ಎಂಬುದು ಪೊಲೀಸ್ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.

About The Author

Leave a Reply