

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಿತಿಗಳ ಜಂಟಿ ಆಶ್ರಯದಲ್ಲಿ ನವೆಂಬರ್ 17ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಬೃಹತ್ ಮಹಿಳಾ ಸಮಾವೇಶದ ಪೂರ್ವಭಾವಿ ಸಭೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶ್ರೀಮತಿ ಐಡಾ ಸುರೇಶ್ ಹಾಗೂ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೇಸ್ ಅದ್ಯಕ್ಷರಾದ ಲವೀನಾ ಮೋರಸ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಉಸ್ತುವಾರಿ ಶ್ರೀಮತಿ ಉಷಾ ಶರತ್ ನಗರ ಮತ್ತು ಗ್ರಾಮೀಣ ಮಹಿಳಾ ಸಮಿತಿಗಳ ಅಧ್ಯಕ್ಷರಾದ ಅಪ್ಪಿ ಹಾಗೂ ಶ್ರೀಮತಿ ಉಷಾ ಅಂಚನ್ ಸಭೆಯಲ್ಲಿ ಭಾಗವಹಿಸಿ, ಮುಂಬರುವ ಮಹಿಳಾ ಸಮಾವೇಶದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು. ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಹಿಳಾ ಕಾರ್ಯಕರ್ತೆಯರ ಸಂಘಟನೆ, ಸಕ್ರಿಯ ಭಾಗವಹಿಸುವಿಕೆ ಹಾಗೂ ವಿವಿಧ ಬ್ಲಾಕ್ ಸಮಿತಿಗಳಿಗೆ ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ವಿವರಿಸಿದರು.

ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆ, ನಾಯಕತ್ವದ ಬೆಳವಣಿಗೆ ಹಾಗೂ ಸಂಘಟನಾತ್ಮಕ ಶಕ್ತಿಯನ್ನು ಬಲಪಡಿಸುವಲ್ಲಿ ಇಂತಹ ಸಮಾವೇಶಗಳು ಮಹತ್ವದ ಪಾತ್ರ ವಹಿಸಲಿವೆ. ಮಹಿಳಾ ಕಾರ್ಯಕರ್ತೆಯರನ್ನು ಒಗ್ಗೂಡಿಸಿ, ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವುದರೊಂದಿಗೆ ಮಹಿಳೆಯರ ಧ್ವನಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಸಮಾವೇಶವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ಒತ್ತು ನೀಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶೋಭಾ, ವಿಟ್ಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಮಿಷಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಶ್ರೀಮತಿ ಜಯಂತಿ, ಮಂಜುಳಾ ಕುಶಲ ಪೆರಾಜೆ, ಸುಲೋಚನಾ ಕೊಳ್ನಾಡು, ಅಮಿತಾ ಭಂಡಾರಿ ಸಾಲೆತ್ತೂರು, ಮಲ್ಲಿಕಾ ಶೆಟ್ಟಿ, ಕಾಂಚಲಕ್ಷಿ, ಭಾರತೀ, ಶ್ರೀಮತಿ ಶಭಾನ ಸೇರಿದಂತೆ ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಹಲವು ಪ್ರಮುಖ ಮಹಿಳಾ ಮುಖಂಡರು ಉಪಸ್ಥಿತರಿದ್ದರು. ಐಡಾ ಸುರೇಶ್ ಸ್ವಾಗತಿಸಿ,ಜಿಲ್ಲಾ ಮಹಿಳಾ ಕಾಂಗ್ರೇಸ್ ಪ್ರದಾನ ಕಾರ್ಯದರ್ಶಿ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ ವಂದಿಸಿದರು.






