October 31, 2026
WhatsApp Image 2026-10-31 at 9.07.36 AM

ಕುಂದಾಪುರ: ಗುಲ್ವಾಡಿ ಮೆಹರಾಜ್ ಜುಮ್ಮಾ ಮಸೀದಿಗೆ ಸೇರಿದ 2.68 ಎಕರೆ ಜಾಗವನ್ನು ಜಮಾತಿನವರ ಗಮನಕ್ಕೆ ತಾರದೆ ವಕ್ಫ್ ಮಂಡಳಿಗೆ ಹಸ್ತಾಂತರಿಸಲಾಗಿದೆ ಎಂದು ಆರೋಪಿಸಿ, ಇದನ್ನು ವಿರೋಧಿಸಿ ಜಮಾತಿನವರು ಶುಕ್ರವಾರ ಮಸೀದಿ ಬಳಿ ಪ್ರತಿಭಟನೆ ನಡೆಸಿದರು.

ಎರಡು ವರ್ಷಗಳ ಹಿಂದೆ ಕೇವಲ 11 ಸದಸ್ಯರ ಆಡಳಿತ ಸಮಿತಿ ಸಭೆ ನಡೆಸಿ, 240 ಮನೆಗಳನ್ನು ಹೊಂದಿರುವ ಜಮಾತಿನವರ ಗಮನಕ್ಕೆ ತಾರದೆ ಮಸೀದಿಗೆ ಸೇರಿದ ಜಾಗವನ್ನು ಮಹಿಳಾ ಕಾಲೇಜು ನಿರ್ಮಾಣಕ್ಕೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕಾಲೇಜು ನಿರ್ಮಾಣಕ್ಕೆ ಈ ಜಾಗ ಸೂಕ್ತವೇ ಎಂಬುದನ್ನು ಪರಿಶೀಲಿಸಲು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯು ನೇಮಿಸಿದ್ದ ಇಬ್ಬರು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜಾಗವು ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರದಿಂದ ದೂರದಲ್ಲಿದ್ದು, ಸೂಕ್ತ ರಸ್ತೆ ಸಂಪರ್ಕವೂ ಇಲ್ಲ ಎಂದು ಲಿಖಿತ ವರದಿ ನೀಡಿದ್ದಾರೆ. ಆದರೆ, ಜಿಲ್ಲಾ ವಕ್ಫ್ ಮಂಡಳಿ ಈ ವರದಿಯನ್ನು ಈವರೆಗೆ ನೀಡದೆ ಮುಚ್ಚಿಟ್ಟಿದೆ ಎಂದು ಹೋರಾಟದ ಪ್ರಮುಖ ಯಾಕೂಬ್ ಖಾದರ್ ಗುಲ್ವಾಡಿ ಆರೋಪಿಸಿದರು.

“ಜಮಾತಿನವರು ಬೆವರಿನ ಹಣದಿಂದ ಈ ಜಾಗವನ್ನು ಖರೀದಿಸಿದ್ದಾರೆ. ಪ್ರತಿವರ್ಷ ಮಸೀದಿಗಾಗಿ ಜಮಾತಿನಿಂದ 25ರಿಂದ 30 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಾರ ಗಮನಕ್ಕೂ ತಾರದೆ ಜಾಗವನ್ನು ಹಸ್ತಾಂತರಿಸಿರುವುದು ಸರಿಯಲ್ಲ. ನಾವು ವಿದ್ಯಾಲಯ ನಿರ್ಮಾಣದ ವಿರೋಧಿಗಳಲ್ಲ. ಆದರೆ, ಜಮಾತಿನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಕೈಗೊಂಡಿರುವುದಕ್ಕೆ ನಮ್ಮ ವಿರೋಧವಿದೆ” ಎಂದು ಯಾಕೂಬ್ ಖಾದರ್ ಸ್ಪಷ್ಟಪಡಿಸಿದರು.

ಜಮಾತಿನ ಮಾಜಿ ಕಾರ್ಯದರ್ಶಿ ಜಿ. ಮಹಮ್ಮದ್ ಮಾತನಾಡಿ, ಜಮೀನಿನ ಕನ್ವರ್ಷನ್ ಹಾಗೂ 9 ಮತ್ತು 11 ದಾಖಲೆಗಳಿಲ್ಲದೆ, ಗುಲ್ವಾಡಿ ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ ಪಡೆದು ಪೊಲೀಸ್ ರಕ್ಷಣೆಯಲ್ಲಿ ಕಳೆದ ಕೆಲವು ದಿನಗಳಿಂದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಪೊಲೀಸ್ ಮಹಾನಿರ್ದೇಶಕರು, ವಕ್ಫ್ ಸಚಿವ ಯು.ಟಿ. ಖಾದರ್ ಫರೀದ್ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಮಾತ್ ಕಮಿಟಿ ಸದಸ್ಯರಾದ ಜಿ. ಇಸ್ಮಾಯಿಲ್, ಅಲಿ ಅಕ್ಬರ್, ಮಾಜಿ ಅಧ್ಯಕ್ಷ ಹಂಜಾ, ಸ್ಥಳೀಯ ಹೋರಾಟಗಾರರಾದ ರಫೀಕ್, ಆರೀಫ್, ಉಸ್ತಾದ್ ಮಹಮ್ಮದ್ ಹನೀಫ್ ಹಾಗೂ ಅಮೀರ್ ಹಂಜಾ ಮಾತನಾಡಿದರು.

ಜಮಾತಿನ ಸುಲೈಮಾನ್ ತೋಟ, ಇಕ್ಬಾಲ್, ಅಲ್ ಫಾಝ್, ಕಲಂದರ್ ಉಸ್ಮಾನ್, ಅಮಾನುಲ್ಲಾ, ಸಮದ್, ಪಕೀರ್ ಸಲಾಂ, ಜಿ.ಎಂ. ಮುನೀರ್ ಸೇರಿದಂತೆ ಜಮಾತಿನ ಸದಸ್ಯರು ಉಪಸ್ಥಿತರಿದ್ದರು.

About The Author

Leave a Reply