October 31, 2026
WhatsApp Image 2026-10-31 at 5.47.51 PM

ಬೆಳ್ತಂಗಡಿ: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಶುಕ್ರವಾರ ಮಣ್ಣಸಂಕ ಬಳಿಯ ಘಟನಾ ಸ್ಥಳದಲ್ಲಿ ಸುದೀರ್ಘ ಮಹಜರು ನಡೆಸಿದ್ದಾರೆ. ಎಸ್‌ಐಟಿ ಮುಖ್ಯಸ್ಥರಾದ ಎಸಿಪಿ ಮನೋಜ್ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಘಟನೆ ನಡೆದ ಜಾಗವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಪ್ರಕರಣದ ಮರುತನಿಖೆಯ ಭಾಗವಾಗಿ ಪ್ರಮುಖ ಸಾಕ್ಷ್ಯ ಹಾಗೂ ವಿವರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಮಹಜರು ಪ್ರಕ್ರಿಯೆಯ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ (PWD) ಇಲಾಖೆಯ ಇಂಜಿನಿಯರ್‌ಗಳು ಎಸ್‌ಐಟಿ ತಂಡದೊಂದಿಗೆ ಉಪಸ್ಥಿತರಿದ್ದರು. ಸ್ಥಳ ಪರಿಶೀಲನೆಗೆ ಮುನ್ನ ಎಸಿಪಿ ಮನೋಜ್ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ, ಘಟನಾ ಸ್ಥಳದ ತಾಂತ್ರಿಕ ವಿವರಗಳು ಮತ್ತು ನಕ್ಷೆಯ ಕುರಿತು ಚರ್ಚಿಸಿದರು. ಈ ಸಭೆಯ ನಂತರ ಅಧಿಕಾರಿಗಳ ತಂಡವು ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷ ಮಹಜರು ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಯಿದೆ.

About The Author

Leave a Reply