November 1, 2026
WhatsApp Image 2026-02-01 at 10.48.22 AM

ಬೆಂಗಳೂರು: ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ತಂದ ಆರೋಪದಡಿ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ  ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ  ತಾಲೂಕಿಗೆ ಗಡಿಪಾರು ಮಾಡಿ, ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಗೃಹ ಇಲಾಖೆಯ ಅಪೀಲು ಪ್ರಾಧಿಕಾರ ಎತ್ತಿಹಿಡಿದಿದೆ. ಈ ಮೂಲಕ ಗಡಿಪಾರು ಆದೇಶ ರದ್ದುಗೊಳಿಸುವಂತೆ ಕೋರಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಇಲಾಖೆಯು ತಿರಸ್ಕರಿಸಿದೆ.

ಕರ್ನಾಟಕ ಪೊಲೀಸ್ ಕಾಯ್ದೆ-1963ರ ಸೆಕ್ಷನ್ 59ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವಾಗಿರುವ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಈ ತೀರ್ಪು ಪ್ರಕಟಿಸಿದ್ದಾರೆ.

ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿದ ಆದೇಶದಲ್ಲಿ ಯಾವುದೇ ನಿಯಮ ಬಾಹಿರತೆ ಅಥವಾ ಪ್ರಕ್ರಿಯಾತ್ಮಕ ಲೋಪಗಳಿಲ್ಲ ಎಂದು ಸ್ಪಷ್ಟಪಡಿಸಿರುವ ಗೃಹ ಇಲಾಖೆ, ತಿಮರೋಡಿ ಅವರ ಅರ್ಜಿಯನ್ನು ವಜಾಗೊಳಿಸಿ ಗಡಿಪಾರು ಆದೇಶವನ್ನು ಖಚಿತಪಡಿಸಿದೆ.

ಪುತ್ತೂರು ಉಪ ವಿಭಾಗಾಧಿಕಾರಿಗಳು 2026ರ ಮಾರ್ಚ್ 13ರಂದು ತಿಮರೋಡಿ ಅವರನ್ನು ಗಡಿಪಾರು ಮಾಡಿ, ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿ, ಶಾಸನಬದ್ಧ ಪ್ರಾಧಿಕಾರವಾದ ಗೃಹ ಇಲಾಖೆಯಲ್ಲೇ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿತ್ತು. ನಂತರ ಹೈಕೋರ್ಟ್ ವಿಭಾಗೀಯ ಪೀಠ ಹಾಗೂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಯಿತಾದರೂ, ಎರಡೂ ಉನ್ನತ ನ್ಯಾಯಾಲಯಗಳು ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ಅರ್ಜಿಗಳನ್ನು ವಜಾಗೊಳಿಸಿದ್ದವು. ಸೂಕ್ತ ಅಪೀಲು ಪ್ರಾಧಿಕಾರವನ್ನೇ ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟ ನಿರ್ದೇಶನ ನೀಡಿತ್ತು.

ಆದೇಶದ ಪ್ರಮುಖ ಅಂಶಗಳು:
ನ್ಯಾಯಾಲಯಗಳ ಸೂಚನೆಯಂತೆ ತಿಮರೋಡಿ ಗೃಹ ಇಲಾಖೆಗೆ ಮೇಲ್ಮನವಿ ಸಲ್ಲಿಸಿದ್ದರು. `ತಮಗೆ ಸಮರ್ಥಿಸಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಿಲ್ಲ, ಕುಟುಂಬಕ್ಕೆ ತಾವೇ ಆಧಾರ’ ಎಂದು ತಿಮರೋಡಿ ಪರ ವಾದಿಸಲಾಗಿತ್ತು. ಆದರೆ ಡಿವೈಎಸ್ಪಿ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಗೃಹ ಇಲಾಖೆ, `ಆರೋಪಿ ವಿರುದ್ಧ ಕೊಲೆಯತ್ನ, ದೊಂಬಿ, ಹಲ್ಲೆ, ಸುಲಿಗೆ ಸೇರಿದಂತೆ ಹಲವಾರು ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.

ಗಡಿಪಾರು ಪ್ರಕ್ರಿಯೆಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೂ ಹಾಗೂ ಆದೇಶದ ಬಳಿಕವೂ ಅವರ ವಿರುದ್ಧ ಹೊಸ ಪ್ರಕರಣಗಳು ದಾಖಲಾಗಿವೆ. ಗಡಿಪಾರು ಕ್ರಮವು ಶಿಕ್ಷೆಯಲ್ಲ, ಬದಲಿಗೆ ಸಾರ್ವಜನಿಕ ಶಾಂತಿ ಕಾಪಾಡಲು ಕೈಗೊಳ್ಳಲಾದ ಮುನ್ನೆಚ್ಚರಿಕಾ ಕ್ರಮ. ವಿಚಾರಣೆಗೆ ಅವರಿಗೆ ಸೂಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿ ಅರ್ಜಿಯನ್ನು ತಿರಸ್ಕರಿಸಿದೆ

About The Author

Leave a Reply