

ಬಂಟ್ವಾಳ:ಕೊಳ್ನಾಡು;ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಇಲಾಖೆ ದ.ಕ,ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ,ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ,ಸಮೂಹ ಸಂಪನ್ಮೂಲ ಕೇಂದ್ರ ಕೊಳ್ನಾಡು,ದ.ಕ.ಜಿ.ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುಳಾಲು,ಇದರ ವತಿಯಿಂದ ನಡೆದ ಕೊಳ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಹಳೆ ವಿದ್ಯಾರ್ಥಿ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅಭಿಮತ

ಕೊಳ್ನಾಡು: ಮಕ್ಕಳ ಪ್ರತಿಭೆಗಳನ್ನು ಕೇವಲ ವಿದ್ಯಾಭ್ಯಾಸದ ಅಂಕಗಳ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ. ಪ್ರತಿಯೊಂದು ಮಗುವಿನಲ್ಲೂ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ ಸೇರಿದಂತೆ ಹತ್ತು ಹಲವು ಪ್ರತಿಭೆಗಳು ಸುಪ್ತವಾಗಿರುತ್ತವೆ. ಅವುಗಳನ್ನು ಗುರುತಿಸಿ, ಹೊರತಂದು ಪ್ರದರ್ಶಿಸಲು ಸೂಕ್ತ ವೇದಿಕೆ ಹಾಗೂ ಅವಕಾಶಗಳನ್ನು ಕಲ್ಪಿಸಿಕೊಟ್ಟಾಗ ಮಾತ್ರ ಮಕ್ಕಳ ವ್ಯಕ್ತಿತ್ವದ ಸಮಗ್ರ ವಿಕಸನ ಸಾಧ್ಯವಾಗುತ್ತದೆ. ಪ್ರತಿಭೆಗಳು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗದೆ ಸಮಾಜದ ಮುಂದೆ ಅನಾವರಣಗೊಳ್ಳಬೇಕು ಎಂದು ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರೂ,ಈ ಶಾಲೆಯ ಹಳೆವಿದ್ಯಾರ್ಥಿ ಶಾಲೆಯ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

ಅವರು ಕೊಳ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ಹಾಗೂ ಪ್ರದರ್ಶಿಸಲು ಅತ್ಯುತ್ತಮ ಅವಕಾಶಗಳು ದೊರೆಯುತ್ತಿವೆ. ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಆದ್ಯತೆ ನೀಡಬೇಕು ಎನ್ನುವುದಕ್ಕೆ ಇಂತಹ ವೇದಿಕೆಗಳೇ ಸಾಕ್ಷಿಯಾಗಿವೆ. ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ಮತ್ತು ಪರೀಕ್ಷೆಯ ಅಂಕಗಳಲ್ಲ; ಮಕ್ಕಳಲ್ಲಿರುವ ಸೃಜನಶೀಲತೆ, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವುದೂ ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ ಎಂದರು.

ವಿದ್ಯಾಭ್ಯಾಸದ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳ ಆಸಕ್ತಿ ಮತ್ತು ಪ್ರತಿಭೆಯನ್ನು ಬೆಳೆಸಿದಾಗ ಅದು ಅವರ ಮುಂದಿನ ಬದುಕಿಗೆ ಉತ್ತಮ ಆಧಾರವಾಗಬಲ್ಲದು. ಇಂದು ಪ್ರತಿಭಾ ಕಾರಂಜಿಯ ವೇದಿಕೆಯಲ್ಲಿ ಗುರುತಿಸಿಕೊಳ್ಳುವ ಮಗು ನಾಳೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಅವಕಾಶವನ್ನೂ ಪಡೆಯಬಹುದು. ಆದ್ದರಿಂದ ಪೋಷಕರು ಮಕ್ಕಳ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು, ಶಿಕ್ಷಕರು ಪ್ರತಿಭೆಗಳಿಗೆ ನೀರೆರೆಯಬೇಕು ಹಾಗೂ ಸಮಾಜ ಇಂತಹ ಪ್ರತಿಭೆಗಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ಮಕ್ಕಳು ಉತ್ತಮ ಶಿಕ್ಷಣ ಪಡೆದು ಪ್ರತಿಭಾವಂತ, ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿ, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಅದ್ಯಕ್ಷರಾದ ಶ್ರೀ.ಶರೀಫ್ ಕೆ.ಎಚ್. ಅದ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಕೊಳ್ನಾಡು ಕ್ಲಸ್ಟರ್ ಸಿ.ಆರ್.ಪಿ.ಶ್ರೀ ರಮೇಶ್, ಶ್ರೀ ರಮೇಶ್ ಕಾಮತ್, ಶ್ರೀ ಆನಂದ ಪೂಜಾರಿ ಕುಳಾಲು, ಶ್ರೀಮತಿ ಶಶಿ ಬಿ., ಶ್ರೀ ನಾಗರಾಜ ಪದಕಣ್ಣಾಯ, ಶ್ರೀ ಶಂಕರ ಎಸ್., ಶ್ರೀ ದಾಮೋದರ ಏರ್ಯ, ಶ್ರೀಮತಿ ಎವ್ಜಿತಾ ಡಿ. ಸೋಜ, ಶ್ರೀಮತಿ ಜೆಸಿಂತಾ ಡಿ. ಸೋಜ, ಶ್ರೀಮತಿ ಎ. ತಿಮ್ಮು, ಶ್ರೀ ಪರಮೇಶ್ವರ ಆಚಾರ್ಯ ಮಂಕುಡೆ ನೆಡ್ಯಾಳ, ಶ್ರೀ ಕರಿಸಿದ್ದಪ್ಪ ಕಳ್ಳೆಪ್ಪನವರ್, ಶ್ರೀಮತಿ ಸವಿತಾ ರೈ, ಶ್ರೀಮತಿ ಪ್ಲೇವಿಯನ್ ಡಿ. ಸೋಜ, ಶ್ರೀಮತಿ ಸಂಧ್ಯಾ, ಶ್ರೀಮತಿ ಡೆಸಿನಾ ಡಿ. ಸೋಜ.






