November 5, 2026
WhatsApp Image 2026-11-04 at 9.50.58 PM

ಹಸಿದ ಹೊಟ್ಟೆಗೆ ಅನ್ನ ನೀಡುವುದು ಪುಣ್ಯದ ಕೆಲಸವಾದರೆ, ಮನೆ ಕಳೆದುಕೊಂಡ ಕುಟುಂಬಕ್ಕೆ ಹೊಸ ಸೂರು ನಿರ್ಮಿಸಿಕೊಡುವುದು ಅದಕ್ಕಿಂತಲೂ ದೊಡ್ಡ ಮಾನವೀಯ ಸೇವೆ. ಇಂತಹದ್ದೇ ಒಂದು ಅಪರೂಪದ ಸೇವಾ ಕಾರ್ಯಕ್ಕೆ ಸಾಕ್ಷಿಯಾಗಿದೆ ಬಂಟ್ವಾಳ ತಾಲೂಕಿನ ಸಜೀಪ ಪ್ರದೇಶ.

ಸುಮಾರು 100 ಮಂದಿ ಸಹೃದಯಿಗಳಿಂದ ಆರಂಭಗೊಂಡ ‘ಮಾಸಿಕ ಅನ್ನಪೂರ್ಣ’ ಯೋಜನೆ ಇಂದು 160ಕ್ಕೂ ಅಧಿಕ ಸದಸ್ಯರ ಒಗ್ಗಟ್ಟಿನ ಸೇವಾ ಬಳಗವಾಗಿ ಬೆಳೆದಿದೆ. ಅಶಕ್ತ ಕುಟುಂಬಗಳಿಗೆ ಪ್ರತಿತಿಂಗಳು ಅಕ್ಕಿ ವಿತರಿಸುವುದರ ಜೊತೆಗೆ, ಮನೆ ಕಳೆದುಕೊಂಡ ಕುಟುಂಬವೊಂದಕ್ಕೆ ಬರೋಬ್ಬರಿ 9.50 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟು ಮಾನವೀಯತೆಯ ಬೆಳಕು ಚೆಲ್ಲಿದೆ.

ಸೇವೆ ಮಾಡುವ ಮನಸ್ಸಿದ್ದರೆ ದೊಡ್ಡ ಸಂಘಟನೆಯೇ ಬೇಕಿಲ್ಲ… ಒಂದಷ್ಟು ಒಳ್ಳೆಯ ಮನಸ್ಸುಗಳು ಒಂದಾದರೆ ಸಾಕು ಎಂಬುದಕ್ಕೆ ಸಜೀಪದ ‘ಮಾಸಿಕ ಅನ್ನಪೂರ್ಣ’ ತಂಡವೇ ಸಾಕ್ಷಿ.

2025ರ ಅಕ್ಟೋಬರ್ ತಿಂಗಳಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಆರಂಭಗೊಂಡ ಈ ಯೋಜನೆಯ ಮೊದಲ ಹೆಜ್ಜೆಯಲ್ಲೇ ಏಳು ಅಶಕ್ತ ಕುಟುಂಬಗಳಿಗೆ ತಲಾ 30 ಕೆ.ಜಿ. ಅಕ್ಕಿ ವಿತರಿಸಲಾಗಿತ್ತು. ಅಂದಿನಿಂದ ನಿರಂತರವಾಗಿ ಸಾಗುತ್ತಿರುವ ಈ ಸೇವಾ ಕಾರ್ಯದ ಮೂಲಕ ಕೇವಲ ಒಂದು ವರ್ಷದ ಅವಧಿಯಲ್ಲಿ ಒಟ್ಟು 77 ಕುಟುಂಬಗಳಿಗೆ ತಲಾ 30 ಕೆ.ಜಿ. ಅಕ್ಕಿ ತಲುಪಿಸಲಾಗಿದೆ.

ಇಂದು ಈ ಸೇವಾ ಬಳಗದಲ್ಲಿ 160ಕ್ಕೂ ಅಧಿಕ ಸಹೃದಯಿಗಳು ಕೈಜೋಡಿಸಿದ್ದು, ಪ್ರತಿತಿಂಗಳು ಅಶಕ್ತ ಕುಟುಂಬಗಳ ಹಸಿವು ನೀಗಿಸುವ ಕಾರ್ಯ ಮುಂದುವರಿದಿದೆ.

ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಹೊಸ ಬದುಕು!

ಇನ್ನು ಈ ತಂಡದ ಮಾನವೀಯ ಕಾರ್ಯ ಕೇವಲ ಅಕ್ಕಿ ವಿತರಣೆಗೆ ಸೀಮಿತವಾಗಿಲ್ಲ. ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಹೊಸ ಮನೆಯನ್ನೇ ನಿರ್ಮಿಸಿಕೊಡುವ ಮೂಲಕ ಮತ್ತೊಂದು ಮಹತ್ಕಾರ್ಯಕ್ಕೆ ಸಾಕ್ಷಿಯಾಗಿದೆ.

ಸಜೀಪ ಹೊಯ್ಗೆ ಮಜಲು ನಿವಾಸಿ ಲಿಂಗಪ್ಪ ಮೂಲ್ಯ ಅವರ ಮನೆಯ ಪಕ್ಕದಲ್ಲಿದ್ದ ಹಲಸಿನ ಮರವೊಂದು ಕಳೆದ ವರ್ಷದ ಮಳೆಗಾಲದಲ್ಲಿ ಬಿದ್ದು ಮನೆಗೆ ಹಾನಿಯಾಗಿತ್ತು. ಇದರಿಂದ ಕುಟುಂಬ ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಕುಟುಂಬದ ಇಬ್ಬರು ಸದಸ್ಯರು ವಿಶೇಷ ಚೇತನರಾಗಿದ್ದು, ಆರ್ಥಿಕ ಸಂಕಷ್ಟದಿಂದ ಮನೆ ದುರಸ್ತಿಯೂ ಸಾಧ್ಯವಾಗಿರಲಿಲ್ಲ.

ಈ ಕುಟುಂಬದ ನೋವಿಗೆ ಸ್ಪಂದಿಸಿದ ಮಾಸಿಕ ಅನ್ನಪೂರ್ಣ ತಂಡ ಮೊದಲು ನೇತಾಜಿ ಯುವಕ ಸಂಘದಲ್ಲಿ ತಾತ್ಕಾಲಿಕ ವಾಸ್ತವ್ಯದ ವ್ಯವಸ್ಥೆ ಮಾಡಿಕೊಟ್ಟಿತು. ಬಳಿಕ ಕುಟುಂಬಕ್ಕೆ ಶಾಶ್ವತ ಸೂರು ನಿರ್ಮಿಸಿಕೊಡುವ ಮಹತ್ವದ ನಿರ್ಧಾರ ಕೈಗೊಂಡಿತು.

2026ರ ಫೆಬ್ರವರಿ 8ರಂದು ಗಣ್ಯರು ಹಾಗೂ ದಾನಿಗಳ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಮುಂದಿನ ದೀಪಾವಳಿಯೊಳಗೆ ಮನೆ ನಿರ್ಮಿಸಿ, ‘ತುಡರ್’ ಎಂಬ ಹೆಸರಿನೊಂದಿಗೆ ಆ ಕುಟುಂಬದ ಮನೆಯಲ್ಲೂ ದೀಪ ಬೆಳಗಿಸಬೇಕೆಂಬ ಸಂಕಲ್ಪ ಮಾಡಲಾಗಿತ್ತು.

ಅದರಂತೆ ಊರ ಹಾಗೂ ಪರವೂರ ದಾನಿಗಳ ಸಹಕಾರದಿಂದ ಸುಮಾರು 9.50 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ನವೆಂಬರ್ 1ರಂದು ಲಿಂಗಪ್ಪ ಮೂಲ್ಯ ಹಾಗೂ ಕುಟುಂಬದವರಿಗೆ ನೂತನ ಮನೆಯನ್ನು ಹಸ್ತಾಂತರಿಸುವ ಮೂಲಕ ತಂಡ ತನ್ನ ಸಂಕಲ್ಪವನ್ನು ಸಾಕಾರಗೊಳಿಸಿತು.

ಗಣ್ಯರ ಸಮ್ಮುಖದಲ್ಲಿ ಗೃಹಪ್ರವೇಶ

ವೇದಮೂರ್ತಿ ಮಿತೋಟ ಪ್ರದೀಪ್ ಭಟ್ ಅವರ ನೇತೃತ್ವದಲ್ಲಿ ನೂತನ ‘ತುಡರ್’ ಮನೆಯ ಗೃಹಪ್ರವೇಶದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸಮಾಜಸೇವಕರು ಹಾಗೂ ದಾನಿಗಳು ಭಾಗವಹಿಸಿ ತಂಡದ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಗದೀಶ್ ಆಳ್ವ ಕುವೆತ್ತಬೈಲು, ರವೀಂದ್ರ ಕಂಬಳಿ, ಶ್ರೀಕಾಂತ್ ಶೆಟ್ಟಿ ಸಂಕೇಶ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶ್ರೀ ಸುರೇಶ್ ಬಂಗೇರ ಆರ್ಯಾಪು ಸ್ವಾಗತಿಸಿದರು. ಶ್ರೀ ದೀಪಕ್ ಕೊಂಕಣ್ತೋಟ ಯೋಜನೆಯ ವರದಿ ಮಂಡಿಸಿದರು. ಶ್ರೀ ಲಕ್ಷ್ಮಣ್ ಮಾಸ್ಟರ್ ವಂದಿಸಿದರು. ಶ್ರೀ ಪ್ರಶಾಂತ್ ಕಂದೂರು ಕಾರ್ಯಕ್ರಮ ನಿರೂಪಿಸಿದರು.

ಒಂದು ಕುಟುಂಬದ ಹಸಿವು ನೀಗಿಸುವುದು ಸೇವೆ… ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನವೀಯತೆ… ಆದರೆ ಮನೆ ಕಳೆದುಕೊಂಡ ಕುಟುಂಬಕ್ಕೆ ಹೊಸ ಸೂರು ನಿರ್ಮಿಸಿಕೊಟ್ಟು ಅವರ ಬದುಕಿನಲ್ಲಿ ಮತ್ತೆ ಬೆಳಕು ಮೂಡಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ.

ಇಂದು ‘ತುಡರ್’ ಮನೆಯ ದೀಪ ಬೆಳಗಿದೆ. ಆದರೆ ಅದರ ಬೆಳಕಿನ ಹಿಂದೆ ನೂರಾರು ಸಹೃದಯಿಗಳ ನಿಸ್ವಾರ್ಥ ಸೇವೆ, ದಾನಿಗಳ ಸಹಕಾರ ಮತ್ತು ಒಗ್ಗಟ್ಟಿನ ಶಕ್ತಿ ಅಡಗಿದೆ.

ಹಸಿದವರಿಗೆ ಅನ್ನ… ಅಶಕ್ತರಿಗೆ ಆಸರೆ… ನಿರ್ಗತಿಕರಿಗೆ ನೆಮ್ಮದಿಯ ಸೂರು…

ಸಮಾಜದಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರುತ್ತಿರುವ ಸಜೀಪದ ‘ಮಾಸಿಕ ಅನ್ನಪೂರ್ಣ’ ತಂಡದ ಈ ಸೇವಾ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿ.

About The Author

Leave a Reply