

ಬೆಂಗಳೂರು : ಕೌಟುಂಬಿಕ ಕಲಹ ಹಾಗೂ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಹಾಗೂ ಆಕೆಯ ಕುಟುಂಬದ ಆರು ಮಂದಿ ಸೇರಿದಂತೆ ಒಟ್ಟು 7 ಜನರನ್ನು ರುಬ್ಬುಗುಂಡಿನಿಂದ ಹೊಡೆದು ಕ್ರೂರವಾಗಿ ಹತ್ಯೆಗೈದಿರುವ ನಡುಕ ಹುಟ್ಟಿಸುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಶ್ರೀರಾಮಪುರದ ನಿವಾಸಿ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್, ಶಂಕರ್, ಸೊಸೆಯಂದಿರಾದ ದಿವ್ಯಾ, ನಳಿನಿ ಹಾಗೂ 7 ವರ್ಷದ ಮೊಮ್ಮಗ ಪುನೀತ್ ಕೊಲೆಯಾದ ದುರ್ದೈವಿಗಳು. ಈ ಭೀಕರ ಸರಣಿ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮೃತರ ಅಳಿಯ, ರಾಜಾಜಿನಗರ ಸಮೀಪದ ನಿವಾಸಿ ಇಂದುಶೇಖರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಇಂದುಶೇಖರ್ಗೆ 20 ವರ್ಷಗಳ ಹಿಂದೆ ಸುನಿತಾ ಜೊತೆ ವಿವಾಹವಾಗಿತ್ತು. ದಂಪತಿ ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಾಗಿದ್ದರು. ಇತ್ತೀಚೆಗೆ ಸತಿ-ಪತಿಯ ನಡುವೆ ತೀವ್ರ ಮನಸ್ತಾಪಗಳು ಉಂಟಾಗಿದ್ದವು. ಹಲವು ಬಾರಿ ರಾಜಿ ಪಂಚಾಯಿತಿ ನಡೆದರೂ ಕಲಹ ಶಮನವಾಗಿರಲಿಲ್ಲ. ತನ್ನ ಪತ್ನಿಯ ಹಠ ಹಾಗೂ ಮನಸ್ತಾಪಕ್ಕೆ ಆಕೆಯ ತಾಯಿ ಮತ್ತು ಸಹೋದರರ ಬೆಂಬಲವೇ ಕಾರಣ ಎಂದು ಇಂದುಶೇಖರ್ ಭಾವಿಸಿದ್ದ. ಅಲ್ಲದೆ, ತವರು ಮನೆಗೆ ಹೋಗಬಾರದೆಂದು ನಿರ್ಬಂಧಿಸಿದ್ದರೂ ಸುನೀತಾ ತಾಯಿಯ ಮನೆಗೆ ಭೇಟಿ ನೀಡುತ್ತಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ, ತನ್ನ ಸಂಸಾರ ಹಾಳಾಗಲು ಪತ್ನಿಯ ಕುಟುಂಬವೇ ಕಾರಣ ಎಂದು ಭಾವಿಸಿ ಇಡೀ ಕುಟುಂಬವನ್ನೇ ಮುಗಿಸಲು ಪೂರ್ವಯೋಜಿತ ಸಂಚು ರೂಪಿಸಿದ್ದ.

ಸಂಚಿನಂತೆ ಆರೋಪಿ ಮೊದಲು ತನ್ನ ಪತ್ನಿ ಸುನೀತಾಳ ತಲೆಗೆ ಮಸಾಲೆ ಅರೆಯುವ ರುಬ್ಬುಗುಂಡಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ನಂದಿ ಬೆಟ್ಟದ ಪ್ರದೇಶಕ್ಕೆ ಒಯ್ದು ಎಸೆದಿದ್ದಾನೆ. ಮರುದಿನ ನೆರೆಹೊರೆಯವರಿಗೆ ಸುನೀತಾ ಗೆಳತಿಯರ ಜೊತೆ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ನಂಬಿಸಿದ್ದ. ತದನಂತರ ಅನುಮಾನ ಬಾರದಂತೆ, ಮದ್ಯದ ಪಾರ್ಟಿ ಮಾಡುವ ನೆಪದಲ್ಲಿ ಭಾಮೈದರಾದ ಶಿವಕುಮಾರ್ ಹಾಗೂ ಶಂಕರ್ನನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ. ಆ ಬಳಿಕ ಶಂಕರ್ ಪತ್ನಿ ನಳಿನಿ, ಶಿವಕುಮಾರ್ ಪತ್ನಿ ದಿವ್ಯಾ, ಅತ್ತೆ ರೂಪಾವತಿ ಹಾಗೂ 7 ವರ್ಷದ ಮಗು ಪುನೀತ್ನನ್ನು ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಕ್ರೂರವಾಗಿ ಹತ್ಯೆ ಮಾಡಿದ್ದಾನೆ.
ಕೊಲೆಗಳ ನಂತರ ಆರೋಪಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಒಪ್ಪಮಾಡಿದ್ದ. ಹತ್ಯೆಗೆ ಬಳಸಿದ್ದ ರುಬ್ಬುಗುಂಡನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸಿ ಕೃತ್ಯದ ಸಾಕ್ಷಿ ನಾಶ ಮಾಡಲು ಯತ್ನಿಸಿದ್ದ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಹತ್ಯೆಗೆ ಬಳಸಿದ ರುಬ್ಬುಗುಂಡು ಹಾಗೂ ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ.






