ಮಂಗಳೂರು: ಕಾರು ಢಿಕ್ಕಿಯಾಗಿಸಿ ನೆರೆ ಮನೆಯಾತನ ಕೊಲೆಗೆ ಯತ್ನ..! ಪಾದಾಚಾರಿ ಮಹಿಳೆಗೆ ಗಾಯ

ಮಂಗಳೂರು: ಬೈಕ್ ಸವಾರನನ್ನು ಗುದ್ದಿ ಸಾಯಿಸಲೆಂದು ಧಾವಿಸಿ ಬಂದ ಕಾರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದು, ಈ ಮಹಿಳೆ ಪಕ್ಕದ ಕಂಪೌಂಡ್‌ಗೆ ಎಸೆಯಲ್ಪಟ್ಟು ಕಬ್ಬಿಣದ ಬೇಲಿಯಲ್ಲಿ ಸಿಲುಕಿಕೊಂಡು ನೇತಾಡಿದ ವಿಲಕ್ಷಣ ಅಪಘಾತವೊಂದು ನಿನ್ನೆ ಸಂಜೆ ಮಂಗಳೂರಿನ ಕಾಪಿಕಾಡ್‌ನಲ್ಲಿ ಸಂಭವಿಸಿದ್ದು, ಇದರ ವೀಡಿಯೊ ಎಲ್ಲೆಡೆ ಹರಿದಾಡಿ ಭಾರಿ ವೈರಲ್‌ ಆಗಿದೆ.

ಕಾರು ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್​ ಮೇಲೆ ನೇತಾಡಿರುವ ದೃಶ್ಯ ಎದೆ ಝಲ್ ಎನಿಸುತ್ತದೆ. ನಗರದ ಬಿಜೈ ಕಾಪಿಕಾಡಿನಲ್ಲಿ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿಯೊಬ್ಬ ಹಳೆ ದ್ವೇಷದಲ್ಲಿ ನೆರೆಮನೆಯಾತನನ್ನು ಕೊಲ್ಲುವ ಉದ್ದೇಶದಿಂದ ತನ್ನ ಆಲ್ಟೊ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಾಗ ಈ ಅಪಘಾತ ಸಂಭವಿಸಿದೆ.

ಬಿ.ಎಸ್.ಎನ್.ಎಲ್ ನಿವೃತ್ತ ಉದ್ಯೋಗಿ ಸತೀಶ್ ಕುಮಾರ್ ಮತ್ತು ಮುರಳಿ ಪ್ರಸಾದ್‌ ಅಕ್ಕಪಕ್ಕದ ನಿವಾಸಿಗಳಾಗಿದ್ದು, ಸತೀಶ್ ಕುಮಾರ್‌ಗೆ ಮುರಳಿ ಪ್ರಸಾದ್ ಹಾಗೂ ಅವರ ಮನೆಯವರೊಂದಿಗೆ ಮೊದಲಿನಿಂದಲು ದ್ವೇಷ ಇತ್ತು. ಈ ಹಿಂದೆ ಮುರಳಿ ಪ್ರಸಾದ್‌ರ ತಂದೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಸತೀಶ್ ಕುಮಾರ್ ಕಾರಣವಿಲ್ಲದೆ ಬೈಕ್‌ನಲ್ಲಿ ಬಂದು ತಾಗಿಸಿ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಈ ಬಗ್ಗೆ ಉರ್ವ ಠಾಣೆಯಲ್ಲಿ 2023ರಲ್ಲಿ ದೂರು ದಾಖಲಾಗಿತ್ತು. ಈ ರೀತಿಯ ಸಣ್ಣಪುಟ್ಟ ಜಗಳಗಳು ಅವರ ನಡುವೆ ಆಗಾಗ ಆಗುತ್ತಿದ್ದವು.

ನಿನ್ನೆ ಬೆಳಗ್ಗೆ 8.15ರ ಸುಮಾರಿಗೆ ಬಿಜೈ ಕಾಪಿಕಾಡ್‌ನ 6ನೇ ಮುಖ್ಯ ರಸ್ತೆಯಲ್ಲಿ ಮುರಳಿ ಪ್ರಸಾದ್‌ ಬೈಕ್ ನಲ್ಲಿ ಮನೆಯಿಂದ ಹೋಗುತ್ತಿರುವಾಗ ಆರೋಪಿ ಸತೀಶ್ ಕುಮಾರ್ ಕಾರಿನಲ್ಲಿ ಕಾದು ಕುಳಿತು ಮುರಳಿ ಪ್ರಸಾದ್‌ರನ್ನು ಕೊಲೆಮಾಡುವ ಉದ್ದೇಶದಿಂದ ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಆದರೆ ಕಾರು ಅಲ್ಲಿ ನಿಲ್ಲದೆ ಮುಂದಕ್ಕೆ ಚಲಿಸಿಕೊಂಡು ಹೋಗಿ ಪಾದಚಾರಿ ಹೆಂಗಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹೆಂಗಸು ಡಿಕ್ಕಿಯ ಬಿರುಸಿಗೆ ಹಾರಿಹೋಗಿ ಪಕ್ಕದ ಕಾಂಪೌಂಡ್‌ನ ಕಬ್ಬಿಣದ ಬೇಲಿಯಲ್ಲಿ ಸಿಲುಕಿ ನೇತಾಡಿದ್ದಾರೆ. ಬೈಕ್‌ ಸವಾರ ಮುರಳಿ ಪ್ರಸಾದ್‌ಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿ ಸತೀಶ್ ಕುಮಾರ್‌ನನ್ನು ಬಂಧಿಸಿ ಕಾರನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಅವನ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲಾಗಿದೆ.

Leave a Reply