ಹಾನಗಲ್ ನಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ವಿಳಂಬ ಧೋರಣೆ ತೋರಿದ ಆರೋಪದಲ್ಲಿ ಹಾನಗಲ್ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಶ್ರೀಧರ್ ಎಸ್.ಆರ್. ಮತ್ತು ಕಾನ್ ಸ್ಟೆಬಲ್ ಇಲ್ಯಾಸ್ ಶೇತಸನದಿ ಎಂಬವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದಲ್ಲಿ ಮಾಹಿತಿ ಸಂಗ್ರಹಿಸುವಲ್ಲಿ ವೈಫಲ್ಯ, ಎಫ್‌ಐಆರ್ ದಾಖಲಿಸುವಲ್ಲಿ ನಿರ್ಲಕ್ಷ್ಯ ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ವಿಳಂಬ ಧೋರಣೆ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೋರ್ವ ಆರೋಪಿಯ ಬಂಧನ
ಮಫೀದ್ ಓಣಿಕೇರಿ
ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಕಿಆಲೂರಿನ ಮಫೀದ್ ಓಣಿಕೇರಿ (23) ಬಂಧಿತ ಆರೋಪಿ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಒಟ್ಟು ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಅತ್ಯಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ ಅಕ್ಕಿಆಲೂರಿನ ಅಫ್ತಾಬ್ ಚಂದನಕಟ್ಟಿ, ಮದರಸಾಬ್ ಮಂಡಕ್ಕಿ ಹಾಗೂ ಅಬ್ದುಲ್ಲಾ ಖಾದರ್, ಜಾಫರ್ ಸಾಬ್ ಹಂಚಿನಮನಿ ಎಂಬವರ ಬಂಧನವಾಗಿತ್ತು. ಬಳಿಕ ಅಕ್ಕಿಆಲೂರಿನ ಇಮ್ರಾನ್ ಬಶೀರ್ ಜೇಕಿನಕಟ್ಟಿ (23) ರೆಹಾನ್ ಹುಸೇನ್ (19), ಅಕ್ಕಿಆಲೂರಿನ ಸಂತೆ ವ್ಯಾಪಾರಿ ಸಾದಿಕ್ ಬಾಬುಸಾಬ್ ಅಗಸಿಮನಿ (29) ಮತ್ತು ಶೋಯೆಬ್ ಮುಲ್ಲಾ (19) ಎಂಬವರನ್ನು ಪೊಲೀಸರು ಬಂಧಿಸಿದ್ದರು.
ಇನ್ನೊಬ್ಬ ಆರೋಪಿ ಮುಹಮದ್ ಸೈಫ್ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಆತನನ್ನು ಬಂಧಿಸಲಾಗುವುದು ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.