ಉಪ್ಪಿನಂಗಡಿ : ಬಜತ್ತೂರು ಗ್ರಾಮದ ಪೊರೋಳಿ ಎಂಬಲ್ಲಿ ಕೆರೆಗೆ ಬಿದ್ದು ಆರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ದಿವಂಗತ ನಾರಾಯಣ ಗೌಡ ಎಂಬವರ ಮಗನಾಗಿರುವ ರಕ್ಷಿತ್ ಉಪ್ಪಿನಂಗಡಿಯ ಖಾಸಗಿ ಶಾಲಾ 1 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಆದಿತ್ಯವಾರದಂದು ತಾಯಿಯೊಂದಿಗೆ ತೋಟಕ್ಕೆ ಹುಲ್ಲು ತೆಗೆಯಲೆಂದು ಹೋದಾತ ತೋಟದಲ್ಲಿನ ಸ್ಪಿಂಕ್ಲರ್ ನೀರಿನಲ್ಲಿ ಸ್ನಾನ ಮಾಡುವ ಆಸೆ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಇದಕ್ಕೆ ನಿರಾಕರಣೆ ತೋರಿದ್ದ ತಾಯಿ ಆತನನ್ನು ಮನೆಗೆ ಕರೆದುಕೊಂಡು ಬಂದು ತಿಂಡಿ ನೀಡಿದ್ದರು. ತಿಂಡಿ ತಿನ್ನುತ್ತಲೇ ಈಗ ಬರುತ್ತೇನೆಂದು ತನ್ನ ಚಿಕ್ಕಮ್ಮನ ಬಳಿ ಹೇಳಿ ಹೋದ ಬಾಲಕ ಬಳಿಕ ನಾಪತ್ತೆಯಾಗಿದ್ದ.
ಹುಡುಕಾಟ ನಡೆಸಿದಾಗ ಅವರ ತೋಟದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಬಾಲಕನ ತಂದೆ ಮೂರು ವರ್ಷದ ಹಿಂದೆ ಅಪಘಾತದಲ್ಲಿ ನಿಧನರಾಗಿದ್ದು, ಆ ಬಳಿಕ ಕೌಟುಂಬಿಕ ವೈಮನಸ್ಸು ಮೂಡಿ ಮಗುವಿನ ಸಾವಿನಲ್ಲಿ ಸಂಶಯ ವ್ಯಕ್ತವಾದ ಕಾರಣ ಶವದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾಗಿ ತನಿಖೆ ನಡೆಸಲಾಗುತ್ತಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.