ಮಂಗಳೂರು: ಬೋಳಿಯಾರ್ ಗ್ರಾಮ ಸೌಹಾರ್ದಕ್ಕೆ ಮಾದರಿಯಾಗಿದೆ. ಆದರೆ ಇತ್ತೀಚೆಗೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಪೊಲೀಸರು ಪ್ರಕರಣವನ್ನು ಬಗೆಹರಿಸಲಿದ್ದಾರೆ. ಆದರೆ ಹೊರಗಿನವರು ಪ್ರಕರಣದಲ್ಲಿ ಸೌಹಾರ್ದ ಕೆಡಿಸುತ್ತಿದ್ದಾರೆ. ಆದ್ದರಿಂದ ಅವರು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಬಾಯಿಮುಚ್ಚಿ ಕೂರುವುದೇ ದೇಶಪ್ರೇಮ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೇ ಕೆಲವು ಮಂದಿಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ಅದಕ್ಕಾಗಿ ಹೊರಗಿನವರು ಅಲ್ಲಿ ರಾಜಕೀಯ ಮಾಡಿ ಮತ್ತೆ ಅಲ್ಲಿಯ ವಾತಾವರಣವನ್ನು ಮತ್ತಷ್ಟು ಕೆಡಿಸುವುದು ಬೇಡ. ಬೋಳಿಯಾರು ಪ್ರಕರಣದಲ್ಲಿ ರಾಜಕೀಯ ಮಾಡಿದಲ್ಲಿ ಯಾವ ಪಕ್ಷಗಳಿಗೂ ಒಂದು ಮತವೂ ಹೆಚ್ಚಾಗುವುದಿಲ್ಲ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಿ ಸಮಸ್ಯೆ ಸೃಷ್ಟಿಸುವವರು ನಿಜವಾದ ದೇಶದ್ರೋಹಿಗಳು ಎಂದು ಹೇಳಿದರು.
ಭಾರತ್ ಮಾತಾಕಿ ಜೈ ಹೇಳಿದರೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಅಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದನ್ನು ಪೊಲೀಸರು ಸಿಸಿಟಿವಿ ಕ್ಯಾಮರಾ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೆರವಣಿಗೆ ಮುಗಿದ ಬಳಿಕ ಮೂವರು ಬೈಕಿನಲ್ಲಿ ಬಂದು ಪ್ರಚೋದನಕಾರಿ ಘೋಷಣೆ ಕೂಗುವುದು ತಪ್ಪು. ಅದಕ್ಕೆ ಪ್ರತಿಯಾಗಿ ಅವರನ್ನು ಹಿಂಬಾಲಿಸಿಕೊಂಡು ಹಲ್ಲೆ ಮಾಡಿರುವ ಕೃತ್ಯವೂ ತಪ್ಪೇ. ಈ ಎರಡೂ ಘಟನೆಗಳ ಬಗ್ಗೆ ಪೊಲೀಸರು ಕಾನೂನು ಪ್ರಕಾರ ಕ್ರಮ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರಕರಣದಲ್ಲಿ ಪೊಲೀಸ್ ಇಲಾಖೆಯಿಂದ ನ್ಯಾಯ ದೊರಕಿಲ್ಲ ಎಂದು ನನ್ನ ಬಳಿ ಬಂದರೆ ಖಂಡಿತಾ ನಾನು ಪರಿಶೀಲಿಸುತ್ತೇನೆ. ನನಗೆ ಅಂತಹ ಯಾವುದೇ ದೂರು ಬಂದಿಲ್ಲ. ವಾಟ್ಸಾಪ್ ವಾಯ್ಸ್ ಮೆಸೇಜ್ ಮೂಲಕ ಯಾರೋ ಹೇಳಿಕೊಂಡು ತಿರುಗಾಡುತ್ತಿದ್ದರೆ ಅದಕ್ಕೆ ನಾನು ಪ್ರತಿಕ್ರಿಯಿಸಲಾರೆ. ನಿರಪರಾಧಿಗಳಿಗೆ ಪೊಲೀಸರು ತೊಂದರೆ ನೀಡಬಾರದು. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದವರು ತಲೆಮರೆಸಿಕೊಂಡಾಗ ವಿಚಾರಣೆಗಾಗಿ ಪೊಲೀಸರು ಕರೆದರೆ ಅದನ್ನು ದೊಡ್ಡ ವಿಚಾರ ಮಾಡಬೇಕಾಗಿಲ್ಲ ಎಂದು ಖಾದರ್ ಹೇಳಿದರು.