
ನಾಡಿನಲ್ಲಿ ದಿನಕ್ಕೊಂದು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಪತ್ನಿಯ ಜೊತೆಗಿನ ಖಾಸಗಿ ಕ್ಷಣಗಳ ವೀಡಿಯೋ ರೆಕಾರ್ಡ್ ಮಾಡಿದ್ದ ಗಂಡ ಹೆಂಡತಿಯನ್ನೇ ಬ್ಲ್ಯಾಕ್ ಮೇಲ್ ಮಾಡಿರುವ ಹೇಯಾ ಘಟನೆ ಬೆಳಕಿಗೆ ಬಂದಿದೆ.



ಮತ್ತೊಂದು ಮದುವೆಗಾಗಿ ಹೆಂಡತಿಯಿಂದ ವಿಚ್ಛೇದನ ಪಡೆಯಲು ಬೆಳಗಾವಿ ನಗರದ ನಿವಾಸಿ ಕಿರಣ್ ಪಾಟೀಲ್ ಎಂಬಾತ ಈ ರೀತಿಯ ನೀಚ ಕೃತ್ಯ ಎಸಗಿದ್ದಾನೆ. ವಿಚ್ಛೇದನ ನೀಡು ಇಲ್ಲವಾದರೆ ಅಶ್ಲೀಲ ವೀಡಿಯೋ, ಫೋಟೋ ವೈರಲ್ ಮಾಡುವುದಾಗಿ ತನ್ನ ಪತ್ನಿಗೇ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತು ದಿಕ್ಕೆ ತೋಚದಾದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ. ಜಿಲ್ಲಾ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಿಸಿ ನ್ಯಾಯ ಕೊಡಿಸುವಂತೆ ನೊಂದ ಮಹಿಳೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಾದ ಬಳಿಕ ಠಾಣೆಗೆ ಕಿರಣ್ ಪಾಟೀಲ್ ನನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಮೊಬೈಲ್ ನಲ್ಲಿ ಹೆಂಡತಿ ಅಶ್ಲೀಲ ವೀಡಿಯೋ, ಫೋಟೋ ಇರುವುದು ಬೆಳಕಿಗೆ ಬಂದಿದೆ. ತಕ್ಷಣ ಅರೆಸ್ಟ್ ಮಾಡಲು ಮುಂದಾದಾಗ ತಪ್ಪಿಸಿಕೊಂಡು ಓಡಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ರಕ್ಷಣೆ ಮಾಡಿದ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಗುಣಮುಖನಾಗಿ ನಿನ್ನೆಯಷ್ಟೇ ಹಿಂಡಲಗಾ ಜೈಲಿಗೆ ಆರೋಪಿ ಕಿರಣ್ ನನ್ನು ರವಾನಿಸಲಾಗಿದೆ.