Visitors have accessed this post 2029 times.
ಗೋವಾದಲ್ಲಿ ತನ್ನ 4 ವರ್ಷದ ಮಗನನ್ನು ಕೊಂದು ಶವವನ್ನು ಬ್ಯಾಗ್ ನಲ್ಲಿಟ್ಟು ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಮಹಿಳೆ ಬೆಂಗಳೂರಿನ ಕೃತಕ ಬುದ್ಧಿಮತ್ತೆ ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಸುಚನಾ ಸೇಠ್ (39ವರ್ಷ) ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಮೈಂಡ್ ಫುಲ್ AI ಲ್ಯಾಬ್ ಸ್ಟಾರ್ಟ್ ಅಪ್ ನ ಸಿಇಒ ಸುಚನಾ ಸೇಠ್ ಎಂಬಾಕೆಯನ್ನು ಸೋಮವಾರ ಚಿತ್ರದುರ್ಗದ ಬಳಿ ಆಕೆಯ ಮಗನ ಶವವಿದ್ದ ಬ್ಯಾಗ್ ಜತೆಗೆ ಬಂಧಿಸಲಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಮ್ ಅಪಾರ್ಟ್ ಮೆಂಟ್ ನಲ್ಲಿ ತನ್ನ ಮಗನನ್ನು ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಗೋವಾದ ಕ್ಯಾಂಡೋಲಿಮ್ ನಲ್ಲಿರುವ ಸೋಲ್ ಬನ್ಯಾನ್ ಗ್ರಾಂಡೆ ಅಪಾರ್ಟ್ ಮೆಂಟ್ ಗೆ ಸುಚನಾ ಸೇಠ್ ತನ್ನ ಮಗನೊಂದಿಗೆ ಶನಿವಾರ ಚೆಕ್ ಇನ್ ಆಗಿದ್ದಳು. ಸೋಮವಾರ ಸೇಠ್ ರೂಂ ಚೆಕ್ ಔಟ್ ಮಾಡಿದ್ದು, ಸಿಬಂದಿ ಬಳಿ ಬೆಂಗಳೂರಿಗೆ ತೆರಳಲು ಕಾರು ಬುಕ್ ಮಾಡಲು ಹೇಳಿದ್ದಳು. ಕಾರು ಬೇಡ, ವಿಮಾನದಲ್ಲಿ ತೆರಳಿ ಎಂಬ ಸಿಬಂದಿಗಳ ಸಲಹೆಯನ್ನು ಆಕೆ ತಿರಸ್ಕರಿಸಿದ್ದಳಂತೆ.
ಈ ಸಂದರ್ಭದಲ್ಲಿ ಸುಚನಾ ಸೇಠ್ ಜತೆ ಮಗು ಇಲ್ಲದಿರುವುದನ್ನು ಅಪಾರ್ಟ್ ಮೆಂಟ್ ಸಿಬಂದಿಗಳು ಗಮನಿಸಿದ್ದರು. ಆಕೆ ಕಾರಿನಲ್ಲಿ ಹೊರಟು ಹೋದ ನಂತರ ಹೌಸ್ ಕೀಪರ್ ರೂಂ ಅನ್ನು ಪರಿಶೀಲಿಸಿದಾಗ ರಕ್ತದ ಕಲೆಗಳು ಬಿದ್ದಿರುವುದು ಗಮನಕ್ಕೆ ಬಂದಿತ್ತು.
ಕೂಡಲೇ ಈ ಬಗ್ಗೆ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕಾರು ಚಾಲಕನಿಗೆ ಕರೆ ಮಾಡಿ, ಸೇಠ್ ಬಳಿ ಮಗು ಎಲ್ಲಿ ಎಂದು ಪ್ರಶ್ನಿಸಿದ್ದರು. ಆಗ ಆಕೆ ಆತನನ್ನು ಗೆಳೆಯನ ಜತೆ ಬಿಟ್ಟಿರುವುದಾಗಿ ಹೇಳಿ, ವಿಳಾಸ ಕೊಟ್ಟಿದ್ದಳು. ಪೊಲೀಸರು ವಿಳಾಸ ಹುಡುಕಿದಾಗ ಅದು ನಕಲಿ ಎಂದು ತಿಳಿಯಿತು.
ಗೋವಾ ಪೊಲೀಸರು ಮತ್ತೆ ಕಾರು ಚಾಲಕನಿಗೆ ಕರೆ ಮಾಡಿದ್ದರು. ಆದರೆ ಈ ಬಾರಿ ಅವರು ಸುಚನಾಳಿಗೆ ಅರ್ಥವಾಗಬಾರದು ಎಂದು ಚಾಲಕನ ಬಳಿ ಕೊಂಕಣಿ ಭಾಷೆಯಲ್ಲಿ ಸಂಭಾಷಣೆ ನಡೆಸಿ, ಕಾರನ್ನು ಸಮೀಪದ ಚಿತ್ರದುರ್ಗ ಠಾಣೆಗೆ ಕೊಂಡೊಯ್ಯುವಂತೆ ಸೂಚನೆ ನೀಡಿದ್ದರು ಎಂದು ತಿಳಿದು ಬಂದಿದೆ.
ನಂತರ ಚಾಲಕ ಕಾರನ್ನು ನೇರವಾಗಿ ಚಿತ್ರದುರ್ಗ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದ. ಬಳಿಕ ಪೊಲೀಸರು ಸುಚನಾ ಸೇಠ್ ಳನ್ನು ಬಂಧಿಸಿದ್ದರು. ಕಾರಿನೊಳಗೆ ಇದ್ದ ಬ್ಯಾಗ್ ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು. AI ಡೆವಲಪರ್, ಸೇಠ್ ಪತಿ ವೆಂಕಟ ರಾಮನ್ ಚಿತ್ರದುರ್ಗಕ್ಕೆ ಆಗಮಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಚನಾ ಸೇಠಳನ್ನು ಹೆಚ್ಚಿನ ತನಿಖೆಗಾಗಿ ಗೋವಾಕ್ಕೆ ಕರೆ ತರಲಾಗಿದೆ.
ತನ್ನ ಮಾಜಿ ಪತಿ ಮಗುವಿನ ಜತೆ ಮಾತನಾಡಬಾರದು ಎಂಬ ಕಾರಣಕ್ಕಾಗಿ ಸುಚನಾ ಸೇಠ್ ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ. 2010ರಲ್ಲಿ ವಿವಾಹವಾಗಿದ್ದ ದಂಪತಿಗೆ 2019ರಲ್ಲಿ ಗಂಡು ಮಗು ಜನಿಸಿತ್ತು. ಇಬ್ಬರ ನಡುವಿನ ವಿರಸದಿಂದಾಗಿ 2020ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ಪ್ರತಿ ಭಾನುವಾರ ಮಗುವನ್ನು ಭೇಟಿಯಾಗಲು ತಂದೆಗೆ ಕೋರ್ಟ್ ಅನುಮತಿ ನೀಡಿತ್ತು.