
ಮಂಗಳೂರು : ನಗರದ ಕಾರ್ ಸ್ಟ್ರೀಟ್‌ನ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಮಂಜನಾಡಿಯ ಊರುಮನೆ ನಿವಾಸಿ ಮಹಮ್ಮದ್ ಸಿನಾನ್(25), ನಾಟೆಕಲ್ ನಿವಾಸಿ ಹೈದರ್ ಆಲಿ ಆಸಿಲ್(20), ನಾಟೆಕಲ್‌ನ ಅಸೈಗೋಳಿ ನಿವಾಸಿ ಮೊಹಮ್ಮದ್ ತಸ್ವೀರ್(34) ಬಂಧಿತ ಆರೋಪಿಗಳು. ಜ್ಯುವೆಲ್ಲರಿ ಶಾಪ್‌ನ ಸಿಬ್ಬಂದಿ ಗಮನ ಬೇರೆಡೆಗೆ ಸೆಳೆದು 97.11 ಗ್ರಾಂ ತೂಕದ 6,00,000 ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಗತಿ ಜ್ಯುವೆಲ್ಲರ್ಸ್ ಮಾಲೀಕ ವಿನೋದ್ ಶೇಟ್ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳೂರು ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಆರೋಪಿಗಳನ್ನು ಬಂಧಿಸಿ 6,00,000 ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿರುವ ಸ್ಕೂಟರ್, 2 ಮೊಬೈಲ್ ಫೋನ್ ಗಳು ವಶಪಡಿಸಿಕೊಂಡಿದ್ದಾರೆ.


