ಮಂಗಳೂರು: ವಿವಾದಿತ ಸುರತ್ಕಲ್ ಟೋಲ್ ಗೇಟ್ ಅವಶೇಷಗಳನ್ನು ತೆರವಿಗೆ ಕೊನೆಗೂ ಎನ್ಎಚ್ಐಎ ಮುಂದಾಗಿದೆ. ಗುರುವಾರ ಸಂಜೆ ವೇಳೆಗೆ ಜೆಸಿಬಿ ಮೂಲಕ ಟೋಲ್ ಗೇಟ್ ನ ನಾಮಾವಶೇಷಗೊಂಡ ಕಟ್ಟಡ, ಗೇಟ್, ಶೆಡ್‌ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಸುರತ್ಕಲ್ ಟೋಲ್ ಗೇಟ್ ಅನ್ನು ತೆರವು ಮಾಡಬೇಕೆಂದು ಟೋಲ್ ಗೇಟ್ ವಿರೋಧಿ ಸಮಿತಿ ಏಳು ವರ್ಷಗಳ ನಿರಂತರ ಹೋರಾಟ ಮಾಡಿತ್ತು.
ಪರಿಣಾಮ ಕಳೆದ ವಿಧಾನಸಭೆಯ ಚುನಾವಣೆಗೆ ನಾಲ್ಕು ತಿಂಗಳು ಇರುವಾಗ ಟೋಲ್ ಗೇಟ್ ಸ್ಥಗಿತವಾಗಿತ್ತು. ಬಳಿಕ ಮತ್ತೆ ಟೋಲ್ ಗೇಟ್ ಆರಂಭವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಜನವಿರೋಧ ಬರುವ ಸಾಧ್ಯತೆ ಇದ್ದುದರಿಂದ ಟೋಲ್ ಗೇಟ್ ಪುನರ್ ಆರಂಭ ಆಗಿರಲಿಲ್ಲ. ಇದೀಗ ಹೆದ್ದಾರಿ ಸವಾರರಿಗೆ ತೊಂದರೆಯಾಗಿದ್ದ ಟೋಲ್ ಗೇಟ್ ಅವಶೇಷಗಳನ್ನು ತೆರವುಗೊಳಿಸಲು ಎನ್ಎಚ್ಎಐ ಮುಂದಾಗಿದೆ. ಜೆಸಿಬಿ ಮೂಲಕ ಕಂಬಗಳನ್ನು, ಕಾಂಕ್ರೀಟ್ ಕಟ್ಟಡ, ಗೋಡೆಗಳನ್ನು ತೆರವುಗೊಳಿಸಿದೆ. ಹಲವು ಬಾರಿ ಇಲ್ಲಿನ ಅವಶೇಷ ರಾತ್ರಿ ಸಾಗುವ ವಾಹನಗಳಿಗೆ ತಿಳಿಯದೆ ಅಪಘಾತಕ್ಕೆ ಕಾರಣವಾಗಿದ್ದೂ ಇದೆ.