October 24, 2025
WhatsApp Image 2024-01-18 at 1.38.17 PM

ಮಂಗಳೂರು, : ಮರಳು ಮಾಫಿಯಾಗಳೊಂದಿಗೆ ಶಾಮೀಲಾಗಿದ್ದಾರೆ ಮತ್ತು ಮೇಲಧಿಕಾರಿಗಳ ಜೊತೆಗೆ ಉಡಾಫೆಯಾಗಿ ವರ್ತಿಸಿದ್ದಾರೆಂದು ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.

ಇತ್ತೀಚೆಗೆ ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾಗ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ತಲಪಾಡಿ ಗ್ರಾಪಂ ಸದಸ್ಯ, ಕಾಂಗ್ರೆಸ್ ಪುಢಾರಿಗೆ ಸೇರಿದ್ದೆನ್ನಲಾದ ಎಂಟು ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಮರಳು ಮತ್ತು ಟಿಪ್ಪರ್ ವಾಹನಗಳನ್ನು ಮುಂದಿನ ತನಿಖೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದ್ದರು. ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕ ಮರಳುಗಾರಿಕೆ ನಡೆಯುತ್ತಿದ್ದರಿಂದ ಎಸಿಪಿ ಧನ್ಯಾ ನಾಯಕ್ ಕಾರ್ಯಾಚರಣೆ ನಡೆಸಲು ಸೂಚಿಸಿದ್ದರೂ, ಇನ್ಸ್ ಪೆಕ್ಟರ್ ಭಜಂತ್ರಿ ನಿರ್ಲಕ್ಷ್ಯ ವಹಿಸಿದ್ದರು. ಈ ವೇಳೆ, ಭಜಂತ್ರಿಯವರು ತನ್ನ ಮೇಲಧಿಕಾರಿ ಎಸಿಪಿ ಜೊತೆಗೆ ಉಡಾಫೆಯಿಂದ ಮಾತನಾಡಿದ್ದರು ಎನ್ನಲಾಗಿದೆ.

ಮರಳು ಮಾಫಿಯಾಗಳೊಂದಿಗೆ ಶಾಮೀಲಾಗಿರುವುದು ಮತ್ತು ತನ್ನೊಂದಿಗೆ ಉಡಾಫೆಯಾಗಿ ವರ್ತಿಸಿದ ಬಗ್ಗೆ ಎಸಿಪಿ ಧನ್ಯಾ ನಾಯಕ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೆ ವರದಿ ನೀಡಿದ್ದರು. ಇದಲ್ಲದೆ, ಇತ್ತೀಚೆಗೆ ಭಜಂತ್ರಿ ಅವರ ನಿವಾಸದ ಬಳಿಯ ಕೆಲವರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ, ತಮ್ಮೊಂದಿಗೆ ದರ್ಪ ತೋರುತ್ತಿದ್ದಾರೆಂದು ಹೇಳಿದ್ದರಂತೆ. ಈ ಬಗ್ಗೆ ಕಮಿಷನರ್ ಪ್ರಶ್ನೆ ಮಾಡಿದಾಗ, ನಾವು ಬದುಕೋದು ಹೇಗೆ ಸ್ವಾಮಿ ಎಂದು ಅವರೊಂದಿಗೂ ಸೋಗಿನ ಮಾತುಗಳನ್ನಾಡಿದ್ದರು ಎನ್ನಲಾಗುತ್ತಿದೆ.ಈ ಹಿಂದೆ ಕೂಡ ಹಲವಾರು ಬಾರಿ ಸಾರ್ವಜನಿಕ ವಲಯದಲ್ಲಿ ದೂರು ಕೇಳಿ ಬರುತಿತ್ತು&ಭಜಂತ್ರಿ ಈ ಹಿಂದೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿದ್ದಾಗಲೂ ಮೇಲಧಿಕಾರಿಗಳ ಜೊತೆಗೆ ಉಡಾಫೆಯಿಂದ ವರ್ತಿಸಿ ಹಿರಿಯ ಅಧಿಕಾರಿಗಳ ಮತ್ತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು.

About The Author

Leave a Reply