Visitors have accessed this post 1003 times.
ಮಾರುತಿ ಆಮ್ನಿ ಮತ್ತು ಬೊಲೆರೋ ಜೀಪು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಬಳಿ ನಡೆದಿದೆ.
ಆಮ್ನಿ ಚಲಾಯಿಸುತ್ತಿದ್ದ ಮಾಜಿ ಯೋಧ, ಬಸವನಹಳ್ಳಿ ನಿವಾಸಿ ರಾಜೇಶ್ ದೇವಯ್ಯ (38) ಹಾಗೂ ಅವರ ಪುತ್ರಿ ನ್ಯಾನ್ಸಿ ಬೊಳ್ಳಮ್ಮ (3) ಮೃತಪಟ್ಟವರು ಎಂದು ತಿಳಿದು ಬಂದಿದೆ.
ರಾಜೇಶ್ ದೇವಯ್ಯ ಮೂಲತಃ ಕಾಲೂರು ಗ್ರಾಮದವರಾಗಿದ್ದು, ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ನೆಲೆಸಿದ್ದರು. ಮಡಿಕೇರಿಯಲ್ಲಿ ತಮ್ಮ ನಾದಿನಿಯ ಪುತ್ರಿಯ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವನಹಳ್ಳಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಆಮ್ನಿ ವಾಹನಕ್ಕೆ ಬೋಯಿಕೇರಿಗೆ ತೋಟದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿರಿಯಾಪಟ್ಟಣ ತಾಲೂಕಿನ ಚನಕಲ್ ಕಾವಲ್‌ನ ಬೊಲೆರೋ ಜೀಪು ಢಿಕ್ಕಿಯಾಗಿದೆ. ರಾಜೇಶ್ ಪತ್ನಿ ಸ್ಮಿತಾ ತಮ್ಮ ದ್ವಿಚಕ್ರ ವಾಹನದಲ್ಲಿ ಆಮ್ನಿಯನ್ನು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.