
ಬಂಟ್ವಾಳ: ಬಾಲಕನೋರ್ವನು ಕಾಲುಜಾರಿ ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ನಾವೂರ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ನಾವೂರ ಗ್ರಾಮದ ಕೋಡಿಬೈಲು ನಿವಾಸಿ ಪ್ರಜ್ವಲ್ ನಾಯಕ್ (13) ಮೃತಪಟ್ಟ ಬಾಲಕ. ನಾವೂರ ಗ್ರಾಮದ ನೆಕ್ಕಿಲಾರು ಎಂಬಲ್ಲಿ ಸ್ನೇಹಿತರೊಂದಿಗೆ ನದಿಯ ಬದಿಗೆ ಪ್ರಜ್ವಲ್ ನಾಯಕ್ ಹೋಗಿದ್ದ. ಈ ವೇಳೆ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯ ಮುಳುಗು ತಜ್ಞರು ಬಾಲಕನನ್ನು ಮೇಲಕ್ಕೆ ಎತ್ತಿದ್ದರೂ ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


