Visitors have accessed this post 511 times.
ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯ ಹಾಜಿ ಅಬ್ದುಲ್ ಅಝೀಝ್ ನಿಧನ
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯ, ಬೊಳ್ಳಾಯಿ ನಿವಾಸಿ ಹಾಜಿ ಅಬ್ದುಲ್ ಅಝೀಝ್ ಬಿಐಬಿ (53) ಅವರು ಗುರುವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬುಧವಾರ ಹಠಾತ್ ಅನಾರೋಗ್ಯ ಕಾಣಿಸಿಕೊಂಡಿದ್ದು ರಾತ್ರಿ ವೇಳೆ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಗುರುವಾರ ಮಧ್ಯಾಹ್ನ ವೇಳೆಗೆ ನಿಧನರಾಗಿದ್ದಾರೆ.
ಮೃತ ಹಾಜಿ ಅಬ್ದುಲ್ ಅಝೀಝ್ ಅವರು ಬೊಳ್ಳಾಯಿಯ ಪ್ರತಿಷ್ಠಿತ ಬಿಐಬಿ ಫ್ಯಾಮಿಲಿಯ ಸದಸ್ಯರಾಗಿದ್ದು, ಬೊಳ್ಳಾಯಿ ಬದ್ರಿಯಾ ಜುಮಾ ಮಸೀದಿಯ ಆಡಳಿತ ಕಮಿಟಿಯ ಸದಸ್ಯರೂ, ಬೊಳ್ಳಾಯಿ ಕುತುಬಿಯ್ಯತ್ ಕಮಿಟಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಮಾಜಿ ಸಚಿವ ಬಿ ರಮಾನಾಥ ರೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ಸಕ್ರಿಯ ಕಾಂಗ್ರೆಸ್ ಸದಸ್ಯರಾಗಿ ಹಲವು ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ಸ್ಥಳೀಯವಾಗಿ ಜನಪರ ಸೇವಾ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೃತರು ಓರ್ವ ಪುತ್ರ ಸಹಿತ ಅಪಾರ ಬಂಧು-ಮಿತ್ರಾದಿಗಳನ್ನು ಅಗಲಿದ್ದಾರೆ.
ಸಂತಾಪ:
ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಶ್ವಿನಿ ಕುಮಾರ್ ರೈ, ಜಿ.ಪಂ.ಮಾಜಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಯುವ ಕಾಂಗ್ರೆಸ್ ಕಾರ್ಯದರ್ಶಿ ಸಿರಾಜ್ ಮದಕ, ಸಜಿಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ, ಮಾಜಿ ಅಧ್ಯಕ್ಷ ಶೋಬಿತ್ ಪೂಂಜಾ, ಸಜಿಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಎನ್.ಅಬ್ದುಲ್ ಕರೀಂ, ಪ್ರಮುಖರಾದ ಇಬ್ರಾಹಿಂ ಕೈಲಾರ್, ಯೂಸುಫ್ ಕರಂದಾಡಿ ಮೊದಲಾದವರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.