
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ, ಆನ್‌ಲೈನ್ ಮೊಬೈಲ್ ಗೇಮ್‌ನ ಪಾಸ್‌ವರ್ಡ್ ಹಂಚಿಕೊಳ್ಳುವ ವಿವಾದದಲ್ಲಿ ಯುವಕನನ್ನು ಆತನ ನಾಲ್ವರು ಸ್ನೇಹಿತರು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ. ಜನವರಿ 8 ರಿಂದ ನಾಪತ್ತೆಯಾಗಿದ್ದ 18 ವರ್ಷದ ಪಾಪೈ ದಾಸ್ ಅವರ ಮೃತದೇಹ ಫರಕ್ಕಾದ ಫೀಡರ್ ಕಾಲುವೆಯ ನಿಶೀಂದ್ರ ಘಾಟ್ ಬಳಿ ಇತ್ತೀಚೆಗೆ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.



ಮೊಬೈಲ್ ಆನ್‌ಲೈನ್ ಗೇಮ್ ಆಡುವುದಕ್ಕೆ ಪಾಸ್‌ವರ್ಡ್ ನೀಡದ ವಿಚಾರದಲ್ಲಿ ಗಲಾಟೆ ನಡೆದ ಹಿನ್ನೆಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಪಾಪೈ ಅವರನ್ನು ಅವರ ನಾಲ್ವರು ಆಪ್ತ ಸ್ನೇಹಿತರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಯುವಕರನ್ನು ಬಂಧಿಸಲಾಗಿದೆ. ಈ ಐವರು ಫರಕ್ಕಾ ಬ್ಯಾರೇಜ್ ಬಳಿ ಆನ್‌ಲೈನ್ ಆಟ ಆಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 8 ರಂದು ಸಂಜೆ ಪಾಪಾಯ್ ಹೊರಗೆ ಹೋಗಿದ್ದು, ಆದರೆ ಹಿಂತಿರುಗಲಿಲ್ಲ. ಜನವರಿ 9 ರಂದು ಮನೆಯವರು ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಐವರು ಕ್ವಾಟರ್ಸ್ ಒಂದರಲ್ಲಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದರು. ಪಾಸ್‌ವರ್ಡ್ ನೀಡಲು ನಿರಾಕರಿಸಿದ್ದಕ್ಕೆ ಯುವಕನನ್ನು ಆತನ ನಾಲ್ವರು ಸ್ನೇಹಿತರು ಸೇರಿ ಕೊಲೆ ಮಾಡಿ, ನಂತರ ತಮ್ಮ ಬೈಕಿನಲ್ಲಿದ್ದ ಪೆಟ್ರೋಲ್ ಸುರಿದು ಸುಟ್ಟು ಹಾಕಿ ಕಾಡಿನಲ್ಲಿ ಎಸೆದಿರುವ ಕುರಿತು ಪೊಲೀಸರು ತನಿಖೆ ಮೂಲಕ ಪತ್ತೆ ಮಾಡಿದ್ದಾರೆ. ಕೊಲೆಯಲ್ಲಿ ಭಾಗಿಯಾದ ನಾಲ್ವರು ಅಪ್ರಾಪ್ತ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದು, ಜಿಲ್ಲಾ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.