January 16, 2026
WhatsApp Image 2024-01-19 at 6.04.23 PM

ಮಂಗಳೂರು : ಕದ್ರಿ ಪಾರ್ಕ್ ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳ ಮೇಲೆ ಇಂದು ಬೆಳಗ್ಗೆ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಕದ್ರಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಪ್ರಾಪ್ತ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳಾದ ಬಂಟ್ವಾಳ ನಿವಾಸಿಗಳಾದ ನಿತಿನ್ ಹರ್ಷ ಸೇರಿದಂತೆ ಪೆರ್ಮುದೆಯ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನೊಬ್ಬನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಂತೂರಿನ ಕಾಲೇಜಿನಲ್ಲಿ ಜರ್ನಲಿಸಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಅಖಿಲ್ ಚಾಕೋ ಹಾಗೂ ದೇರಳಕಟ್ಟೆಯ ಕಾಲೇಜೊಂದರಲ್ಲಿ ನರ್ಸಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ತಂಡವೊಂದು ನೈತಿಕ ಪೊಲೀಸ್ ಗಿರಿ ನಡೆಸಿದೆ. ಇಂದು ಬೆಳಗ್ಗೆ ದೇರಳಕಟ್ಟೆಯಿಂದ ಈ ಜೋಡಿ ಬಸ್ ನಲ್ಲಿ ಆಗಮಿಸಿ ಜ್ಯೋತಿಯಲ್ಲಿ ಇಳಿದಿದೆ. ಬಸ್ ನಲ್ಲಿದ್ದಾಗಲೇ ಹಿಂಬಾಲಿಸಿಕೊಂಡು ಬಂದ ಐದಾರು ಮಂದಿಯ ಯುವಕರ ತಂಡ ಇವರು ಕದ್ರಿ ಪಾರ್ಕ್ ಗೆ ಬರುತ್ತಿದ್ದಾಗ ಪಾರ್ಕ್ ರಸ್ತೆಯಲ್ಲೇ ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದೆ. ಕದ್ರಿ ಪಾರ್ಕ್ ರಸ್ತೆಯಲ್ಲಿ ಜೋಡಿಯನ್ನು ತಡೆದು ವಿಚಾರಿಸಿದ ಯುವಕರ ತಂಡ ಹಲ್ಲೆಗೆತ್ನಿಸಿದೆ. ಈ ವೇಳೆ ಜೋಡಿ ರಿಕ್ಷಾದಲ್ಲಿ ಹೋಗಲು ಯತ್ನಿಸಿದಾಗ ಮತ್ತೆ ತಂಡ ಅವರನ್ನು ಎಳೆದಾಡಿದೆ. ಆಗ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಠಾಣಾ ಪಿಎಸ್ಐ ಉಮೇಶ್ ಕುಮಾರ್ ಹಾಗೂ ತಂಡ ಘಟನೆ ನಡೆದ ಐದೇ ನಿಮಿಷಕ್ಕೆ ಸ್ಥಳಕ್ಕೆ ದೌಢಾಯಿಸಿದೆ‌. ವಿದ್ಯಾರ್ಥಿಗಳಿಬರನ್ನು ರಕ್ಷಿಸಿ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿ ನಡೆಸಿದ ತಂಡದಲ್ಲಿ ಮತ್ತೋರ್ವ ಅಪ್ರಾಪ್ತ ಬಾಲಕನಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply