ಗಾಂಧೀಜಿ ಕುರಿತು ಸತ್ಯ ವಿಚಾರ ಪಸರಿಸೋಣ: ರಮಾನಾಥ ರೈ

ಮಂಗಳೂರು: ನಮ್ಮ ದೇಶದ ಜಾತ್ಯತೀತ ಪರಂಪರೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಮಹಾತ್ಮಾ ಗಾಂಧೀಜಿ. ಗಾಂಧೀಜಿ ಕುರಿತು ಅಪಪ್ರಚಾರ ನಡೆಯುತ್ತಿರುವ ಕಾಲಘಟ್ಟದಲ್ಲಿ ಅವರ ಜೀವನ, ಆದರ್ಶ, ಮೌಲ್ಯಗಳ ಕುರಿತ ಸತ್ಯ ವಿಚಾರಗಳನ್ನು ಸಮಾಜದಲ್ಲಿ ಪಸರಿಸುವ ಕಾರ್ಯ ನಡೆಯಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಮಹಾತ್ಮಾ ಗಾಂಧೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿ ಕುರಿತು ತಪ್ಪು ಭಾವನೆಗಳನ್ನು ಇಟ್ಟುಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಗಾಂಧೀಜಿ ಇಡೀ ಜಗತ್ತು ಮೆಚ್ಚಿದ, ಒಪ್ಪಿಕೊಂಡ ನಾಯಕ, ಗಾಂಧಿ ಜನ್ಮದಿನವನ್ನು ಜಗತ್ತಿನ ದೇಶಗಳು ಅಹಿಂಸಾ ದಿನವಾಗಿ ಆಚರಿಸುತ್ತಿದ್ದರೆ, ನಮ್ಮ ದೇಶದಲ್ಲಿ ಗಾಂಧಿ ಹತ್ಯೆ ಮಾಡಿದವರನ್ನೇ ವೈಭವೀಕರಿಸುವುದು ನೋವು ತರುವ ವಿಚಾರ. ಗಾಂಧೀಜಿ ಯಾಕೆ ಹುತಾತ್ಮರಾದರು ಎನ್ನುವುದನ್ನು ವಿಮರ್ಶೆ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ರಮಾನಾಥ ರೈ ಹೇಳಿದರು.
ಅಹಿಂಸಾ ಚಳವಳಿ ಮೂಲಕ ಸ್ವಾತಂತ್ರ್ಯ ತಂದುಕೊಡಬಹುದು ಅಂತ ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟದ್ದು ಮಹಾತ್ಮಾ ಗಾಂಧೀಜಿ. ಎಷ್ಟೋ ವರ್ಷಗಳ ಕಾಲ ಜೈಲುವಾಸವನ್ನೂ ಅನುಭವಿಸಿದ್ದಾರೆ. ಆದರೆ ಗಾಂಧೀಜಿ ದೇಶಕ್ಕಾಗಿ ಏನು ತ್ಯಾಗ ಮಾಡಿದ್ದಾರೆ ಎಂದು ಲಘುವಾಗಿ ಮಾತನಾಡುವವರಿದ್ದಾರೆ. ಈ ಹಿನ್ನೆಲೆಯಲ್ಲಿ, ಗಾಂಧೀಜಿ ಬಗ್ಗೆ ಸತ್ಯ ವಿಚಾರಗಳುಳ್ಳ ಪುಸ್ತಕಗಳನ್ನು ಓದಿಕೊಂಡು, ಸತ್ಯ ವಿಚಾರಗಳನ್ನು ಸಮಾಜದಲ್ಲಿ ಪಸರಿಸಬೇಕು. ಗಾಂಧೀಜಿ ಅವರ ಕೊಡುಗೆಗಳನ್ನು ಸದಾ ಕಾಲ ದೇಶ ಸ್ಮರಿಸಿಕೊಳ್ಳಬೇಕು ಎಂದರು.
ಇಂದು ದೇಶದ ಪರಿಸ್ಥಿತಿ ಅಪಾಯದಲ್ಲಿದೆ. ಆಡಳಿತ ಯಂತ್ರ ಒಂದು ದೃಷ್ಟಿಯಲ್ಲಿ ಅಪಾಯದ ಕಡೆ ಹೋಗ್ತಿದೆ. ಅದನ್ನು ತಡೆಯಬೇಕಾದರೆ ದೇಶದ ಜಾತ್ಯತೀತ ಚಳವಳಿಯನ್ನು ಸ್ಥಿರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಂದಾಗುವ ಅಗತ್ಯವಿದೆ ಎಂದು ರೈ ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಗಾಂಧೀಜಿ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತ. ಗಾಂಧೀಜಿ ಬಗ್ಗೆ ಇಂದಿನ ಪೀಳಿಗೆಗೆ ಶಾಲೆ ಕಾಲೇಜುಗಳಲ್ಲಿ, ಯುವಕರಿಗೆ ಆದಷ್ಟು ತಿಳಿಹೇಳುವ ಕೆಲಸ ಮಾಡಬೇಕಿದೆ. ಗಾಂಧೀಜಿ ಕಾಣುತ್ತಿದ್ದ ಕನಸನ್ನು ಯಾವಾಗ ಮರೆಯುತ್ತೇವೋ ಅಂದು ದೇಶದ ಪ್ರಜಾಪ್ರಭುತ್ವಕ್ಕೆ ಕಂಟಕ ಬರಲಿದೆ. ಹಾಗಾಗಿ ಗಾಂಧೀಜಿ ಆದರ್ಶಗಳನ್ನು ಯುವ ಪೀಳಿಗೆಗೆ ತಿಳಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಕೃಪಾ ಆಳ್ವಾ, ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲೀಂ, ಪ್ರಕಾಶ್ ಸಾಲಿಯಾನ್, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷರಾದ ಬಿ.ಎಂ. ಅಬ್ಬಾಸ್ ಅಲಿ, ಮನೋರಾಜ್ ರಾಜೀವ್, ಲಾರೆನ್ಸ್ ಡಿಸೋಜ, ಸುಹಾನ್ ಆಳ್ವ, ಅಬ್ದುಲ್ ರವೂಫ್, ಕಿರಣ್ ಬುಡ್ಲೆಗುತ್ತು, ನೀರಜ್‌ಪಾಲ್, ಶಬೀರ್ ಎಸ್., ಸುಧೀರ್ ಟಿ ಕೆ, ಪ್ರಕಾಶ್ ಆಳ್ವಿನ್, ತನ್ವಿರ್ ಶಾ, ಗಣೇಶ್ ಪೂಜಾರಿ, ವಿಕಾಸ್ ಶೆಟ್ಟಿ, ಹೈದರ್ ಬೋಳಾರ್, ಸುರೇಖಾ ಚಂದ್ರಹಾಸ್, ಲಿಯಾಕತ್ ಶಾ, ಯೋಗೀಶ್ ನಾಯಕ್, ಚಂದ್ರಕಲಾ ಜೋಗಿ, ಸುರೇಶ್ ಪೂಜಾರಿ, ನಮಿತಾ ಡಿ ರಾವ್, ಸಲೀಮ್ ಮಕ್ಕ, ಶಾಂತಲಾ ಗಟ್ಟಿ, ಜೋರ್ಜ್, ಸಬಿತಾ ಮಿಸ್ಕಿತ್, ಮಲರ್ ಮೋನು, ದಿನೇಶ್ ರಾವ್ ಇದ್ದರು. ಮಾಜಿ ಮೇಯರ್‌ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಶುಭೋದಯ ಆಳ್ವ ವಂದಿಸಿದರು.

Leave a Reply