Visitors have accessed this post 625 times.

ಮಂಗಳೂರನ್ನು ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್ ಬಂಧನ, ಕೃತ್ಯ ನಡೆದು ಐದೇ ಗಂಟೆಯಲ್ಲೇ ಹಿಡಿದ ಪೊಲೀಸರು

Visitors have accessed this post 625 times.

ಕಡಲನಗರಿ ಮಂಗಳೂರನ್ನು ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್​ನ್ನು ಕೃತ್ಯ ನಡೆದ ಐದೇ ಗಂಟೆಯಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ನಗರದ ಕಾಪಿಕಾಡು ಬಳಿಯ ಕೋಟೆಕಣಿ ಎಂಬಲ್ಲಿ ಮಧ್ಯರಾತ್ರಿ  ವೃದ್ಧ ದಂಪತಿಗಳಿದ್ದ ಮನೆಯ ಕಿಟಕಿ ಸರಳು‌ ಮುರಿದು ನುಗ್ಗಿ, ದಂಪತಿಯಾದ ವಿಕ್ಟರ್ ಮೆಂಡೋನ್ಸಾ(71) ಹಾಗೂ ಪ್ಯಾಟ್ರಿಷಾ ಮೆಂಡೋನ್ಸಾ(60) ಅವರ ಮೇಲೆ ಹಲ್ಲೆ ಮಾಡಿ ಲೂಟಿ ಮಾಡಿದ್ದರು. ಇದೀಗ ಆರೋಪಿಗಳಾದ ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ಎಂಬ ನಾಲ್ವರನ್ನು ಅರೆಸ್ಟ್​ ಮಾಡಿದ್ದು, ಇವರು ಮಧ್ಯಪ್ರದೇಶದವರು ಎಂಬುದು ತಿಳಿದು ಬಂದಿದೆ.ಇನ್ನು ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ್ದ 4 ಜನ ಯುವಕರ (ಚಡ್ಡಿ) ಗ್ಯಾಂಗ್, ಬೆಡ್ ರೂಂ ನ ಕಿಟಕಿಯ ಸರಳನ್ನು ಕಟ್ ಮಾಡಿ ಮನೆ ಒಳಗೆ ನುಗ್ಗಿತ್ತು. ಈ ವೇಳೆ 1 ಲಕ್ಷ ರೂ. ಮೌಲ್ಯದ 10 ಬ್ರಾಂಡೆಡ್ ವಾಚ್​ಗಳು ಹಾಗೂ 3 ಸಾವಿರ ನಗದು ಹಣವನ್ನು ಸುಲಿಗೆ ಮಾಡಿದ್ದರು. ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು. ಈ ಕುರಿತು ಕೆಎಸ್​​ಆರ್​ಟಿಸಿ ಬಸ್ ಸಿಬ್ಬಂದಿ ವಿಚಾರಿಸಿದಾಗ ಬಸ್ ಹಾಸನ ಕಡೆ ತೆರಳುತ್ತಿರುವುದು ಪತ್ತೆಯಾಗಿದೆ. ಈ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಿ, ಸಕಲೇಶಪುರ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ಜನರನ್ನು ವಶಕ್ಕೆ ಪಡೆದು, ಬಂಧಿತರಿಂದ 12 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ನಿನ್ನೆ ರಾತ್ರಿ ಎಂದಿನಂತೆ ವಿಕ್ಟರ್ ಮೆಂಡೋನ್ಸಾ ಹಾಗೂ ಪ್ಯಾಟ್ರಿಷಾ ಮೆಂಡೋನ್ಸಾ ದಂಪತಿ ಊಟ ಮುಗಿಸಿ ತಮ್ಮ ಮನೆಯಲ್ಲಿ ಮಲಗಿದ್ದರು. ಆದ್ರೆ, ಮಧ್ಯರಾತ್ರಿ 1.49ಕ್ಕೆ ನಾಲ್ವರು ದರೋಡೆಕೋರರ ಗ್ಯಾಂಗ್ ಇವರ ಮನೆಗೆ ಎಂಟ್ರಿಯಾಗಿದೆ. ಮನೆಯ ಇನ್ನೊಂದು ರೂಂನ ಕಿಟಕಿಯ ಸರಳು ಮುರಿದು ಒಳನುಗ್ಗಿದ್ದ ಈ ಗ್ಯಾಂಗ್, ನೇರವಾಗಿ ದಂಪತಿ ಮಲಗಿದ್ದ ರೂಂಗೆ ಬಂದಿದೆ. ದಂಪತಿ ಎಚ್ಚರವಾಗುತ್ತಿದ್ದಂತೆ ರಾಡ್‌ನಲ್ಲಿ ವಿಕ್ಟರ್ ಮೆಂಡೋನ್ಸಾ ಕಾಲಿಗೆ ಹಲ್ಲೆ ನಡೆಸಿದ್ದಾರೆ. ಬಳಿಕ ರಾಡ್ ಹಿಡಿದುಕೊಂಡು ನಗದು ಹಣ ನೀಡುವಂತೆ ಬೆದರಿಸಿದ್ದಾರೆ. ನಗದು ಹಣ ನಮ್ಮ ಬಳಿ ಇಲ್ಲ ಎಂದಾಗ ಕಪಾಟು, ಬೀರು ತಡಕಾಡಿದ್ದಾರೆ. ಈ ಸಂದರ್ಭ ಚಿನ್ನಾಭರಣ ಸಿಕ್ಕಿದ್ದು, ಜೊತೆಗೆ ಹೊಸ ಮೊಬೈಲ್ ಫೋನ್, ವಾಚ್‌ನ್ನು ದೋಚಿದ್ದಾರೆ. ಸುಮಾರು ಮೂರು ಗಂಟೆ ಮನೆಯೊಳಗಿದ್ದ ದರೋಡೆಕೋರರು, ಹೋಗುವಾಗ ದಂಪತಿ ಬಳಿ ಕಾರಿನ ಕೀ ಕೇಳಿ, ಮನೆಯಲ್ಲಿದ್ದ ಕಾರಿನಲ್ಲೇ ಎಸ್ಕೇಪ್ ಆಗಿದ್ದಾರೆ. ಬಳಿಕ ಪರಾರಿಯಾಗಲು ಬಳಸಿದ ಕಾರನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಗಡಿಭಾಗ ಹೆಜಮಾಡಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದರು.

ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ವಿದೇಶದಲ್ಲಿದ್ದಾರೆ. ಹೀಗಾಗಿ ಈ ಘಟನೆ ಬಳಿಕ ಸುಧಾರಿಸಿಕೊಂಡ ವಿಕ್ಟರ್ ಮೆಂಡೋನ್ಸಾ ಹಾಗೂ ಪತ್ನಿ ಪ್ಯಾಟ್ರಿಷಾ ಮೆಂಡೋನ್ಸಾ ನೆರೆಯ ಮನೆಗೆ ಹೋಗಿ ದರೋಡೆ ವಿಚಾರ ತಿಳಿಸಿದ್ದಾರೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಹಲ್ಲೆಯಿಂದ ಗಾಯಗೊಂಡ ವಿಕ್ಟರ್ ಮೆಂಡೋನ್ಸಾ ಅವರವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು, ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಈ ದರೋಡೆ ಕೃತ್ಯವನ್ನು ಚಡ್ಡಿ ಗ್ಯಾಂಗ್‌ನವರು ನಡೆಸಿರುವ ಅನುಮಾನ ವ್ಯಕ್ತವಾಗಿತ್ತು. ಎರಡು‌ ದಿನಗಳ ಹಿಂದೆ ನಗರದ ಕೋಡಿಕಲ್ ಭಾಗದಲ್ಲಿ ಈ ಚಡ್ಡಿ ಗ್ಯಾಂಗ್ ಕಳ್ಳತನ ಕೃತ್ಯ ನಡೆಸಿತ್ತು. ಸಿ.ಸಿ ಕ್ಯಾಮರಾದಲ್ಲಿ ಚಡ್ಡಿ ಗ್ಯಾಂಗ್‌ನ ಚಲನವಲನದ ದೃಶ್ಯಗಳು ಸೆರೆಯಾಗಿತ್ತು. ಮೈಮೇಲೆ ಚಡ್ಡಿ, ಬನಿಯಾನ್, ತಲೆ ಮೇಲೊಂದು‌ ಬಟ್ಟೆ ಸುತ್ತಿಕೊಳ್ಳುವ ಈ ಗ್ಯಾಂಗ್‌ನ ಸದಸ್ಯರು, ಸೊಂಟದಲ್ಲಿ ಆಯುಧ ಇಟ್ಟುಕೊಂಡು ಓಡಾಡುತ್ತಾರೆ. ಈ ಖತರ್ನಾಕ್ ಚಡ್ಡಿ ಗ್ಯಾಂಗ್ ಈ ಹಿಂದೆಯೂ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಭಾಗದಲ್ಲಿ ಮನೆ ಕಳ್ಳತನ ಕೃತ್ಯ ನಡೆಸಿತ್ತು.  ಇಂದು ದರೋಡೆ ನಡೆಸಿದ ನಾಲ್ವರು ಸಹ ಚಡ್ಡಿ ಧರಿಸಿಯೇ ಬಂದಿದ್ದರು ಎಂದು ಮನೆಯೊಡತಿ ಪ್ಯಾಟ್ರಿಷಾ ಮೆಂಡೋನ್ಸಾ ಮಾಹಿತಿ ನೀಡಿದ್ದರು. ಅದರಂತೆ ಇದೀಗ ಆರೋಪಿಗಳನ್ನು ಅರೆಸ್ಟ್  ಮಾಡಿದ್ದಾರೆ.

Leave a Reply

Your email address will not be published. Required fields are marked *