ಮಲ್ಪೆ: ‘ರಾಜ್ಯ ಸರಕಾರದ ಉಚಿತ ಯೋಜನೆಗಳ ಜೊತೆ ಬಾಂಬ್ ಕೂಡ ಉಚಿತವಾಗಿ ಸಿಗುತ್ತದೆ’ ಎಂದು ಟೀಕಿಸಿ, ಸಿಎಂ ಸಿದ್ಧರಾಮಯ್ಯ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿ ವಿಡಿಯೋ ಹರಿಬಿಟ್ಟ ಗರಡಿ ಮಜಲು ನಿವಾಸಿ ದಿವಾಕರ್ ಕೋಟ್ಯಾನ್ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿವಾಕರ್ ಕೋಟ್ಯಾನ್ ಮಾಡಿರುವ ವಿಡಿಯೋದಲ್ಲಿ, ‘ಬಸ್ ಟಿಕೆಟ್, 2000ರೂ., ವಿದ್ಯುತ್ ಬಿಲ್ ಫ್ರೀ ಜೊತೆಗೆ ಈಗ ಹೊಸದಾಗಿ ಬಾಂಬ್ ಸ್ಪೋಟ ಫ್ರೀ ಕೂಡ ರಾಜ್ಯ ಸರಕಾರ ಕೊಡುತ್ತಿದೆ. ಇದಕ್ಕೂ ಏನು ಹಣ ಕೊಡಲು ಇಲ್ಲ. ಎಲ್ಲವೂ ಫ್ರೀ ನೇರವಾಗಿ ಮೇಲೆ…ನೋ ಪಾಸ್ ನೋ ವೀಸಾ.. ಸನ್ಮಾನ್ಯ ಮುಖ್ಯಮಂತ್ರಿ ಸಿದ್ರುಲ್ಲಾ ಖಾನ್… ಹಿಂದುಗಳೇ ಫ್ರೀ ಬೇಕಲ್ಲ ತೆಗೆದುಕೊಳ್ಳಿ,. ಬಸ್, ವಿದ್ಯುತ್, 2000ರೂ. ಜೊತೆ ಬಾಂಬ್ ಕೂಡ ಫ್ರೀ ಸಿಗುತ್ತದೆ. ಮಜಾ ಮಾಡಿ…’ಎಂದು ಹೇಳಿರುವುದು ಕಂಡುಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ದಿವಾಕರ್ ಕೋಟ್ಯಾನ್ ರಾಜ್ಯ ಸರಕಾರದ ಯೋಜನೆಗಳ ಜೊತೆ ಬಾಂಬ್ ಉಚಿತ ಹೇಳು ವುದರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಮ್ಮದ್ ಉಡುಪಿ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.