ಬೆಂಗಳೂರು : ರಾಜ್ಯದಲ್ಲಿ ನಿಗದಿಯಾಗಿದ್ದ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಕ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಮೌಲ್ಯಾಂಕನ ಪರೀಕ್ಷೆಯನ್ನು ಶಾಲಾ ಶಿಕ್ಷಣ ಇಲಾಖೆ ಮುಂದೂಡಿದ್ದು, ಸುತ್ತೋಲೆ ಹೊರಡಿಸಿದೆ. ಮಾರ್ಚ್ 11ರಿಂದ 18ರವರೆಗೆ ನಿಗದಿಯಾಗಿದ್ದ ಪರೀಕ್ಷೆಗಳಲ್ಲಿ ಈಗಾಗಲೇ ಪ್ರಥಮ ಭಾಷೆ ಮತ್ತು ದ್ವಿತೀಯ ಭಾಷೆ ಪರೀಕ್ಷೆಗಳು ನಡೆದಿದೆ. ಕನ್ನಡ ಮತ್ತು ಇಂಗ್ಲಿಷ್ ಪರೀಕ್ಷೆಗಳು ನಡೆದಿದ್ದು, ಬುಧವಾರದಿಂದ ಮುಂದಿನ ನಾಲ್ಕು ದಿನ ನಡೆಯಬೇಕಿದ್ದ ಉಳಿದ ವಿಷಯಗಳ ಪರೀಕ್ಷೆಗಳನ್ನು ಸುಪ್ರೀಂಕೋರ್ಟ್ ಮುಂದಿನ ಆದೇಶ ಬರುವವರೆಗೆ ಮಂದೂಡಲಾಗಿದೆ. 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗುತ್ತಿದೆ. ಸದರಿ ಮೌಲ್ಯಾಂಕನವನ್ನು ಹೈಕೋರ್ಟ್ ಏಕಸದಸ್ಯ ಪೀಠವು ರದ್ದುಪಡಿಸಿ ನೀಡಿದ್ದ ತೀರ್ಪಿಗೆ ವಿಭಾಗೀಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿರುತ್ತದೆ. ಸದರಿ ವಿಭಾಗೀಯ ಪೀಠವು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಘನ ಸರ್ವೋಚ್ಛ ನ್ಯಾಯಾಲಯವು ರದ್ದುಪಡಿಸಿರುತ್ತದೆ. ಹಾಗಾಗಿ ಪರೀಕ್ಷೆಯನ್ನು ಮುಂದೂಡಲಾಗಿರುತ್ತದೆ. ಸದರಿ ಮಾಹಿತಿಯನ್ನು ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ಮತ್ತು ಬ್ಲಾಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕರು/ ಪ್ರಾಂಶುಪಾಲರಿಗೆ ತಿಳಿಸಿ ಸೂಕ್ತ ಕ್ರಮವಹಿಸುವುದು. ಮುಂದುವರೆದು, ಈ ಕಛೇರಿಯ ಮುಂದಿನ ಆದೇಶದವರೆಗೆ ಈಗಾಗಲೇ ಕ್ಷೇತ್ರಶಿಕ್ಷಣಾಧಿಕಾರಿಗಳ ಹಂತಕ್ಕೆ ಸರಬರಾಜಾಗಿರುವ ಪ್ರಶ್ನೆಪತ್ರಿಕೆಗಳನ್ನು ತಮ್ಮ ಹಂತದಲ್ಲಿ ಸಂರಕ್ಷಿಸಿ ಸುರಕ್ಷಿತವಾಗಿಡಲು ಎಲ್ಲಾ ಬ್ಲಾಕುಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು (ಆಡಳಿತ) ರವರು ಸೂಕ್ತ ಕ್ರಮವಹಿಸುವುದು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.