
ಶಿವಮೊಗ್ಗ: ಇಡೀ ದೇಶದ ಜನರು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರು ಅಂದುಕೊಂಡಿದ್ದಾರೆ. ಅಂತಹ ದೇವರು ನಮ್ಮ ಊರಿಗೆ ಬರುತ್ತಿದ್ದಾರೆ. ನಮ್ಮ ಜನತೆಯ ಪರವಾಗಿ ದೇವರಿಗೆ ಸ್ವಾಗತ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.



ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಈ ಸಂಬಂಧ ಸುದ್ದಿಗಾರರು, ನೀವು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಎಸ್ ಈಶ್ವರಪ್ಪ, ನಾನು ಇಂದಿನ ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ. ಪ್ರಧಾನಿ ಮೋದಿಯವರಿಗೆ ನಾನು ಈ ವಿಚಾರವಾಗಿ ಕ್ಷಮೆ ಕೇಳುತ್ತೇನೆ. ನರೇಂದ್ರ ಮೋದಿ ಅವರು ಹಿಂದುತ್ವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಪ್ರಧಾನಿ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದು ಹೇಳಿದರು.
ಇಂದು ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಅನಿವಾರ್ಯವಾಗಿ ಭಾಗವಹಿಸುತ್ತಿಲ್ಲ ಎಂದ ಕೆಎಸ್ ಈಶ್ವರಪ್ಪ, ವಿವಿಧ ಮಠಾಧೀಶರು, ದೇವಸ್ಥಾನಗಳಿಗೆ ತೆರಳಿ ಆಶೀರ್ವಾದ ಪಡೆಯುತ್ತೇನೆ. ಶಿವಮೊಗ್ಗದಿಂದ ಗೆದ್ದು ಮತ್ತೆ ಪ್ರಧಾನಿ ಮೋದಿ ಅವರ ಬಳಿ ತೆರಳುತ್ತೇನೆ ಎಂದು ಹೇಳುವ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ತಾನು ಸ್ಪರ್ಧಿಸುವ ಬಗ್ಗೆ ಪುನರುಚ್ಚಾರ ಮಾಡಿದರು.
ಇನ್ನೊಂದೆಡೆ ತನ್ನ ತವರೂರಿಗೆ ಬಿಜೆಪಿಯ ಅತ್ಯುನ್ನತ ನಾಯಕ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ನಡೆ ಕುತೂಹಲ ಕೆರಳಿಸಿದ್ದು, ಮೋದಿ ಕಾರ್ಯಕ್ರಮಕ್ಕೆ ಹೋಗ್ತಾರಾ ಈಶ್ವರಪ್ಪ ಅನ್ನೋ ಪ್ರಶ್ನೆಗೆ ಈಶ್ವರಪ್ಪ ಮಾತ್ರ ತಾನು ಹೋಗೋದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿಯ ಘಟಾನುಘಟಿಗಳ ಮನವೊಲಿಕೆಗೂ ಕೆ ಎಸ್ ಈಶ್ವರಪ್ಪ ಬಗ್ಗಿಲ್ಲ. ರಾಷ್ಟ್ರೀಯ ನಾಯಕರು ಮನೆಗೆ ಬಂದು ನಿರ್ಧಾರ ಕೈಬಿಡುವಂತೆ ಕೇಳಿಕೊಂಡರೂ ಸಹ ಬಿಗಿಪಟ್ಟು ಬಿಡದ ಈಶ್ವರಪ್ಪ, ಇವತ್ತು ಇಡೀ ದಿನ ದೇವಾಲಯ ಹಾಗೂ ಮಠಗಳಿಗೆ ಭೇಟಿ ನೀಡಲಿದ್ದಾರೆ.
ಮಗನಿಗೆ ಹಾವೇರಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಇತ್ತೀಚೆಗಷ್ಟೇ ನ್ಯೂಸ್ 18 ಜೊತೆ ಮಾತನಾಡಿದ್ದ ಮಾಜಿ ಶಾಸಕ ಕೆಎಸ್ ಈಶ್ವರಪ್ಪ, ಹಾವೇರಿ ಲೋಕಸಭೆ ಚುನಾವಣೆಗೆ ಯಡಿಯೂರಪ್ಪರ ಮನೆಗೆ ಹೋದಾಗ ಆ ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸುತ್ತೇನೆ ಅಂತ ಹೇಳಿದ್ದರು. ಈಗ ಕಾಂತೇಶ್ ಗೆ ಟಿಕೆಟ್ ತಪ್ಪಿಸಿ ಯಡಿಯೂರಪ್ಪನವರು ಅನ್ಯಾಯ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಮಗನೇ ನೇರವಾಗಿ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾರಣ. ಐದು ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅನ್ಯಾಯ ಆಗಿರೋದು ಎಲ್ಲಾ ನಾಯಕರಿಗೂ ಗೊತ್ತಿದೆ ಎಂದು ಹೇಳಿದ್ದರು.
ಅಲ್ಲದೇ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿ ಎಲ್ಲರ ಅಭಿಪ್ರಾಯ ಸಂಗ್ರಹಣೆ ಮಾಡುತ್ತೇನೆ ಎಂದಿದ್ದ ಕೆಎಸ್ ಈಶ್ವರಪ್ಪ, ಸಭೆ ಬಳಿಕ ತಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಘೋಷಿಸಿದ್ದರು. ಅಲ್ಲದೇ, ಹಿಂದುತ್ವದ ವಾದವಾಗಿ ನಾನು, ಸಿಟಿ ರವಿಯಾಗಲಿ, ಪ್ರತಾಪ್ ಸಿಂಹ ಆಗ್ಲಿ ಎಲ್ಲರೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹಿಂದುತ್ವವೇ ನನ್ನ ಉಸಿರು, ಎಲ್ಲರಿಗೂ ನೋವಾಗಿದೆ. ಯಡಿಯೂರಪ್ಪನವರಿಗೆ ಅವರ ಮಗ ಮುಖ್ಯ. ನನ್ನ ಮನಸಿನಲ್ಲಿ ಇರುವುದು ಮುಖ್ಯ ಅಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ, ನನ್ನ ಎದೆ ಬಗೆದರೆ ಶ್ರೀರಾಮ ಕಾಣುತ್ತಾನೆ, ಯಡಿಯೂರಪ್ಪ ಎದೆ ಬಗೆದರೆ ಒಂದು ಕಡೆ ತನ್ನ ಮಕ್ಕಳು, ಇನ್ನೊಂದು ಕಡೆ ಶೋಭಾ ಕರಂದ್ಲಾಜೆ ಕಾಣುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದ್ದರು.
ಸದ್ಯ ಈಶ್ವರಪ್ಪ ನಡೆ ಕುತೂಹಲ ಕೆರಳಿಸಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್ ಯಡಿಯೂರಪ್ಪ ಪುತ್ರನಿಗೆ ಆತಂಕ ಹುಟ್ಟಿಸಿರೋದು ಮಾತ್ರ ಸುಳ್ಳಲ್ಲ.