ಮೊಹಿಯುದ್ದೀನ್ ಬಾವಾ ಪಕ್ಷೇತರರಾಗಿ ಸ್ಪರ್ಧೆ?

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮಾಜಿ ಶಾಸಕ ಮೊಹಿದೀನ್ ಬಾವಾ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ದಿಟ್ಟವಾಗಿದೆ.
ಕಳೆದ ಒಂದು ವಾರದಿಂದ ಬಾವಾ ಚಟುವಟಿಕೆಗಳನ್ನು ಗಮನಿಸಿದಾಗ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ಅವರು ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಮಂಗಳೂರು ಉತ್ತರಕ್ಕೆ ಸೀಮಿತರಾಗಿದ್ದ ಬಾವಾ ಇದೀಗ ಲೋಕಸಭಾ ಚುನಾವಣಾ ಘೋಷಣೆಯಾಗುತ್ತಿದ್ದಂತೆ ತಮ್ಮ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ವಿಸ್ತರಿಸಿಕೊಂಡಿದ್ದಾರೆ. ಕಳೆದ ವಾರ ಬೆಳ್ತಂಗಡಿ, ಸುಳ್ಯ, ಕಡಬ ದಲ್ಲಿ ತಮ್ಮ ಬೆಂಬಲಿಗರೊಂದಿಗೆ ಗುಪ್ತ ಸಭೆ ನಡೆಸಿದ್ದ ಅವರು ಭಾನುವಾರ ಬಂಟ್ವಾಳ ಕ್ಷೇತ್ರದ ಆಯ್ದ ಮುಖಂಡರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ.
ಮಂಗಳೂರು ದಕ್ಷಿಣ, ಉಳ್ಳಾಲ ಮತ್ತು ಮೂಡುಬಿದಿರೆ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಬಾವಾ, ಇದನ್ನು ಮತಗಳನ್ನಾಗಿ ಪರಿವರ್ತಿಸಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಒಂದು ವಾರದಿಂದ ನಿರಂತರ ಗುಪ್ತ ಸಭೆಗಳು ಬಾವಾ ಬೆಂಬಲಿಗರಿಂದ ನಡೆಯುತ್ತಿದೆ.
ಬಾವಾ ಪಕ್ಷೇತರರಾಗಿ ನಿಂತರೆ, ಕಾಂಗ್ರೆಸ್ ನ ಒಂದು ಗುಂಪು ಬೆಂಬಲಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿ ಟಿಕೆಟ್ ತಪ್ಪಿ ಅಸಮಾಧಾನ ದಲ್ಲಿರುವ ನಳಿನ್ ಕುಮಾರ್ ಕಟೀಲು ಬಣದವರೂ ಒಳಂಗಿದೊಳಗೆ ಬಾವಾ ಪರವಾಗಿ ಬೆಂಬಲಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಬಾವಾ ಸ್ಪರ್ಧಿಸಿದ್ದೇ ಆದರೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ.

Leave a Reply