Visitors have accessed this post 129 times.
ಬೆಂಗಳೂರು: ಬಿಜೆಪಿ ಟಿಕೆಟ್‌ಗಳು ಘೋಷಣೆ ಆಗುತ್ತಿದ್ದಂತೆ ಕರ್ನಾಟಕ ಬಿಜೆಪಿಯಲ್ಲಿ ಬಂಡಾಯ ಬಿಸಿ ಹೆಚ್ಚಾಗುತ್ತಿದೆ. ಹಾವೇರಿ ಟಿಕೆಟ್ ಕೈತಪ್ಪುತ್ತಿದ್ದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಂಡಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಮಾಜಿ ಸಿಎಂ ಆಗಿರುವ ಕೇಂದ್ರ ಸಚಿವ ಡಿವಿ ಸದಾನಂದಗೌಡರು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ತೊರೆಯುವರೇ? ಬಂಡಾಯ ಸಾರುವರೇ? ಪಕ್ಷದಲ್ಲೇ ಉಳಿಯುವರೇ? ಎಂಬೆಲ್ಲ ನಿರ್ಧಾರಗಳು ಮಂಗಳವಾರ (ಮಾರ್ಚ್ 19) ತಿಳಿಯಲಿವೆ.
ಟಿಕೆಟ್ ಹಂಚಿಕೆ ಬಿಜೆಪಿ ವರಿಷ್ಠರ ಕುರಿತು ಅಸಮಾಧಾನ ಹೊಂದಿರುವ ಡಿವಿ ಸದಾನಂದಗೌಡರು ಅವರಿಗೆ ಕಾಂಗ್ರೆಸ್ ಡಿಸಿಎಂ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ತಿಳಿಸಬಹುದೇ? ಇಲ್ಲವೇ ಕೇಂದ್ರ ಸಚಿವ ಸ್ಥಾನ, ಸಿಎಂ ಸ್ಥಾನ ನೀಡಿದ್ದ ಬಿಜೆಪಿ ವಿರುದ್ಧ ಪಕ್ಷೇತರ ಸ್ಪರ್ಧೆ ಘೋಷಿಸಿ ಬಂಡಾಯ ಸಾರಬಹುದೇ? ಎಂಬ ಕುತೂಹಲ ಹೆಚ್ಚಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರವನ್ನು ಶೋಭಾ ಕರಂದ್ಲಾಜೆ ಅವರಿಗೆ ನೀಡಿದ್ದು, ಸದಾನಂದಗೌಡರು ಯಾವ ಕ್ಷೇತ್ರವನ್ನು ನೀಡಿಲ್ಲ. ಈಗಾಗಲೇ 20 ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಅದರ ಬೆನ್ನಲ್ಲೆ ಕೆಎಸ್ ಈಶ್ವರಪ್ಪ ಬಂಡಾಯ ಸಾರಿದ್ದು, ಸದಾನಂದಗೌಡರು ಅದೇ ಸಾಲಿಗೆ ಸೇರುತ್ತಾರೆ ಎಂಬುದು ಮಂಗಳವಾರ ಸುದ್ದಿಗೋಷ್ಠಿ ಬಳಿಕ ಗೊತ್ತಾಗಲಿದೆ.
ಕಾಂಗ್ರೆಸ್ (Congress) ನಾಯಕರ ಸಂಪರ್ಕ ವಿಚಾರ ಒಪ್ಪಿಕೊಂಡ ಡಿವಿಎಸ್, ನನ್ನನ್ನ ಬೇರೆಬೇರೆಯವರು ಬಂದು ಸಂಪರ್ಕ ಮಾಡುತ್ತಿರುವುದು ನಿಜ. ನಿನ್ನೆ ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು ಸಮಾಧಾನ ಹೇಳಿದ್ದಾರೆ. ಇವತ್ತು ನನ್ನ ಜನ್ಮದಿನ. ಇಡೀ ದಿನ ಕುಟುಂಬದ ಸದಸ್ಯರ ಜತೆ ಕಳೆದು ನಂತರ ನಿಶ್ಚಯ ಮಾಡುತ್ತೇನೆ ಎಂದು ಹೇಳಿದರು.
ನನ್ನ ನಿರ್ಧಾರಗಳನ್ನು ನಾನು ನನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಬೇಕು. ಬೆಂಗಳೂರು ಉತ್ತರದಲ್ಲಿ ನಿಮಗೆ ಟಿಕೆಟ್ ಎಂದು ಹೇಳಿ ಕೊನೇ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ. ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ಮಂಗಳವಾರ ಸುದ್ದಿಗೋಷ್ಠಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿಬಿಟ್ಟರೆ ನಾಳೆಗೆ ಏನೂ ಉಳಿಯುವುದಿಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಹೀಗಿದ್ದರೂ ತಿಳಿದೂ ತಿಳಿದೂ ಹೀಗೆ ಮಾಡಿರುವುದು ಬೇಜಾರು ತಂದಿದೆ ಎಂದು ತಿಳಿಸಿದರು.