ಕಾಸರಗೋಡು: ಖಾಸಗಿ ಬಸ್ಸೊಂದು ಮಗುಚಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟು, ವಿದ್ಯಾರ್ಥಿಗಳು ಸೇರಿದಂತೆ 20 ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಚಾಲಿಂಗಾಲ್ ನಲ್ಲಿ ಸೋಮವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ಚಾಲಿಂಗಾಲ್ ನ ಪೆರಿಯ ಗ್ರಾಮ ಪಂಚಾಯತ್ ಕಚೇರಿ ಸಮೀಪ ಈ ಅಪಘಾತ ನಡೆದಿದೆ. ಚಾಲಕ ಚೇತನ್ ಕುಮಾರ್ (37) ಮೃತಪಟ್ಟವರು.
ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಹಿನ್ನೆಲೆಯಲ್ಲಿ ಟೋಲ್ ಬೂತ್ ನಿರ್ಮಿಸಲು ಚಾಲಿಂಗಾಲ್ ನಲ್ಲಿ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಿದ್ದು, ಈ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಬಸ್ಸಿನಡಿಯಲ್ಲಿ ಸಿಲುಕಿದವರನ್ನು ಪರಿಸರವಾಸಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹೊರತೆಗೆದು ಆಸ್ಪತ್ರೆಗೆ ತಲುಪಿಸಿದರು ಎಂದು ತಿಳಿದುಬಂದಿದೆ.