ಕಾಸರಗೋಡು : ಯುಡಿಎಫ್ ಆಡಳಿತವಿರುವ ಕಾಸರಗೋಡು ಪುರಸಭೆಯಲ್ಲಿ ಗುರುವಾರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾರಾಮಾರಿ ನಡೆದಿದೆ. ಸದಸ್ಯರ ನಡುವೆ ನಡೆದ ಮಾರಾಮಾರಿಯಿಂದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕಾಸರಗೋಡು ಪುರಸಭೆಯ ಆಡಳಿತ ಮಂಡಳಿ ಸಭೆ ಗುರುವಾರ ಕರೆಯಲಾಗಿತ್ತು. ಸಭೆಯಲ್ಲಿ ಪುರಸಭಾ ಸದಸ್ಯರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಹಣ ಮಂಜೂರು ವಿಚಾರದಲ್ಲಿ ಚರ್ಚೆ :
ಸಾಂಸ್ಕೃತಿಕ ಕೇಂದ್ರಕ್ಕೆ ಹಣ ಮಂಜೂರು ಮಾಡಿರುವ ವಿಚಾರದಲ್ಲಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ವೇಳೆ ಲೀಗ್ ಸದಸ್ಯರಾದ ಮಜೀದ್ ಕೊಲ್ಲಂಪಾಡಿ ಹಾಗೂ ಮಮ್ಮುಚಾಲ ಅವರು ಅನುದಾನ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಲೀಗ್ ಸದಸ್ಯರ ಆಕ್ಷೇಪಕ್ಕೆ ಬಿಜೆಪಿ ಸದಸ್ಯರೂ ಕೂಡಾ ದನಿ ಗೂಡಿಸಿ ಸಭೆಯಲ್ಲಿ ಗದ್ದಲ ಎಬ್ಬಿಸಿದ್ರು.
ಈ ವೇಳೆ ಮಾತಿಗೆ ಮಾತು ಬೆಳೆದು ಎರಡೂ ಪಕ್ಷಗಳವರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಗಲಾಟೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳೂ ಕೂಡಾ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಕಾಮಗಾರಿ ನಡೆದಲ್ಲೇ ಮತ್ತೊಂದು ಕಾಮಗಾರಿ:
ಅಣಂಗೂರು ಸಮೀಪದಲ್ಲಿ ಕೆಲ ಸಮಯದ ಹಿಂದೆ ಆರೋಗ್ಯ ಕೇಂದ್ರವೊಂದನ್ನು ನಿರ್ಮಿಸಲಾಗಿತ್ತು. ಆದ್ರೆ ಅದೇ ಸ್ಥಳದಲ್ಲಿ ಲೈಬ್ರೆರಿ ನಿರ್ಮಿಸಲು ಅನುದಾನ ನೀಡಿದ್ದೇ ಸಭೆಯಲ್ಲಿನ ಗದ್ದಲಕ್ಕೆ ಕಾರಣವಾಗಿದೆ. ಕಾಮಗಾರಿ ನಡೆದ ಸ್ಥಳದಲ್ಲೇ ಮತ್ತೊಂದು ಕಾಮಗಾರಿಗೆ 6 ಲಕ್ಷ ಅನುದಾನ ಒದಗಿಸಿದ ಬಗ್ಗೆ ಲೀಗ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಸರ್ಕಾರದಿಂದ ಬರುವ ಅನುದಾನಗಳನ್ನು ಯುಡಿಎಫ್ ಆಡಳಿತ ಇರುವ ಪುರಸಭೆ ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದೆ. ತಮಗೆ ಬೇಕಾದವರಿಗೆ ಮಾತ್ರ ಅನುದಾನ ನೀಡುತ್ತಿದೆ. ಅಷ್ಟೇ ಅಲ್ಲದೆ, ಕಾಮಗಾರಿ ನಡೆಸದೇ ಕಾಮಗಾರಿ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದೆ ಎಂದು ಆರೋಪಿಸಲಾಗಿದೆ.
ಗದ್ದಲದಿಂದಾಗಿ ಪುರಸಭೆಯ ಆಡಳಿತ ಮಂಡಳಿ ಸಭೆಯನ್ನು ಯಾವುದೇ ಅಜೆಂಡಾ ಪಾಸ್ ಮಾಡದೆ ವಿಸರ್ಜಿಸಲಾಗಿದೆ.