
ಮಂಗಳೂರು: ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂತೂರಿನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.



ಮೃತರನ್ನು ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಮೊಮ್ಮಗ ಶಮಿತ್ ಶೆಟ್ಟಿ(29) ಯಾನೆ ಬಂಟಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಶಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಮಿತ್ ಶೆಟ್ಟಿಯವರ ಸ್ನೇಹಿತನ ಮನೆಯಲ್ಲಿ ದೈವದ ಕೋಲದಲ್ಲಿ ಭಾಗವಹಿಸಿದ ಬಳಿಕ ತೊಕ್ಕೊಟ್ಟಿನಲ್ಲಿದ್ದ ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆಕಾರು ಡಿಕ್ಕಿಯಾದ ರಭಸಕ್ಕೆ ಡಿವೈಡರ್ ಮೇಲೆ ಹಾಕಿದ್ದ ಕಬ್ಬಿಣದ ತಡೆಬೇಲಿ ಮುರಿದು ಹೋಗಿದೆ. ಕಾರಿನ ಮುಂಭಾಗ ಯಾವುದೆಂದು ತಿಳಿಯಲಾಗದಷ್ಟು ನಜ್ಜುಗುಜ್ಜಾಗಿದ್ದು ತಡೆಬೇಲಿಯ ಮೇಲೆ ಸಿಕ್ಕಿಕೊಂಡಿತ್ತು. ಬೆಳಗ್ಗೆ ಜೆಸಿಬಿ ಮೂಲಕ ಕಾರನ್ನು ತೆರವುಗೊಳಿಸಲಾಗಿತ್ತು. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿಯ ಹಿರಿಯ ನಾಯಕಿ ಲಲಿತಾ ಸುಂದರ್ ಅವರ ಪುತ್ರ ಸಂತೋಷ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಮೊಮ್ಮಗ ಶಮಿತ್ ಬಾಲ್ಯದಿಂದಲೇ ತಾಯಿ, ಅಜ್ಜಿಯ ಆರೈಕೆಯಲ್ಲಿ ಬೆಳೆದಿದ್ದರು. ಮೃತರು ತಾಯಿ, ಸಹೋದರಿ, ಅಜ್ಜಿಯನ್ನು ಅಗಲಿದ್ದಾರೆ.